ಬೀದರ್ | ವ್ಯಕ್ತಿಯ ಕೊಲೆ ಪ್ರಕರಣ ; ಹಳೆ ವೈಷಮ್ಯದಿಂದ ಕೃತ್ಯ ನಡೆದಿದೆ : ಎಸ್ಪಿ ಪ್ರದೀಪ್ ಗುಂಟಿ
ಬೀದರ್ : ಮನ್ನಾಏಖೇಳ್ಳಿ ಗ್ರಾಮದ ನಿವಾಸಿ ಗಣಪತಿ (34) ಎಂಬ ವ್ಯಕ್ತಿಯನ್ನು ಹಳೆ ವೈಷಮ್ಯದಿಂದ ಕೊಲೆ ಮಾಡಲಾಗಿದೆ ಎಂದು ಎಸ್ಪಿ ಪ್ರದೀಪ್ ಗುಂಟಿ ಅವರು ಹೇಳಿದರು.
ಇಂದು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗಣಪತಿ ಕೊಲೆಯ ಕೃತ್ಯದಲ್ಲಿ ನಾಲ್ಕು ಜನ ಆರೋಪಿಗಳು ಭಾಗವಹಿಸಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ಅದರಲ್ಲಿ ಒರ್ವ ಆರೋಪಿಯು ಗಣಪತಿಯ ಹತ್ತಿರದ ಸಂಬಂಧಿಯ ಯುವತಿಯೊಬ್ಬಳ ಜೊತೆಗೆ ಸ್ನೇಹ ಬೆಳೆಸಿದ್ದನು. ಇದರಿಂದಾಗಿ ಗಣಪತಿಯು ಆತನಿಗೆ ಎಚ್ಚರಿಕೆ ನೀಡಿದ್ದನು ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ಅದೇ ವಿಷಯವನ್ನು ಮನಸಲ್ಲಿಟ್ಟುಕೊಂಡು, ವೈಷಮ್ಯ ಬೆಳೆಸಿಕೊಂಡು 3-4 ಹುಡುಗರನ್ನು ಸೇರಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಅವರು ತಿಳಿಸಿದರು.
ಗಣಪತಿಯವರು ಮನೆಗೆ ತೆರಳುವಾಗ ಆತನನ್ನು ಹಿಂಬಾಲಿಸುತ್ತಾ ಹೋಗಿ ಆತನನ್ನು ತಡೆದು ನಾಲ್ಕು ಜನ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸ್ಥಳದಲ್ಲಿಯೇ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಕೊಲೆ ಮಾಡಿದ ತಕ್ಷಣವೇ ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದರು. ತಕ್ಷಣವೇ ಪ್ರಕರಣ ದಾಖಲಿಸಿಕೊಂಡ ನಮ್ಮ ಪೊಲೀಸರು 3 ಗಂಟೆಯ ಒಳಗಾಗಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.