ಬೀದರ್ | ಜನವಾಡಾ ಗ್ರಾಮ ಪಂಚಾಯತ್‌ನಲ್ಲಿ ಸರಕಾರದ ಅನುದಾನ ದುರ್ಬಳಕೆ : ಕ್ರಮಕ್ಕೆ ಆಗ್ರಹ
ಬೀದರ್ : ಜನವಾಡಾ ಗ್ರಾಮ ಪಂಚಾಯತ್ ನಲ್ಲಿ ಪಿಡಿಓ, ಡಿಇಓ ಮತ್ತು ಗುತ್ತಿಗೆದಾರರು ಸೇರಿಕೊಂಡು ಸರಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಆಗ್ರಹ ಮಾಡಿದೆ.
ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿಪತ್ರದಲ್ಲಿ, ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೆ ಸರಕಾರದ 15ನೇ ಹಣಕಾಸು ಯೋಜನೆಯ ಅನುದಾನವನ್ನು ಲೂಟಿ ಮಾಡಿದ್ದಾರೆ. ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ 7 ದಿನದ ಒಳಗಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ತಮ್ಮ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ತಾಲ್ಲೂಕು ಅಧ್ಯಕ್ಷ ನಿಲೇಶ್ ರಾಠೋಡ್, ಧನರಾಜ್ ಎನ್.ಚಿಟ್ಟಾವಾಡಿ, ಕರಣ್ ರಾಠೋಡ್, ಶಿವಕುಮಾರ್ ಮಾಮುಡಗಿ, ರಾಜಗೊಂಡ್ ಹಾಗೂ ಸಂತೋಷ್ ಜೆ.ಬಿ. ಇದ್ದರು.