ಬೀದರ್ | ನಾರಾಯಣ ಹೃದಯಾಲಯದ ವತಿಯಿಂದ 125 ನೀಟ್ ಪುನರಾವರ್ತಿತ ಅಭ್ಯರ್ಥಿಗಳಿಗೆ ಶಿಷ್ಯ ವೇತನ : ಡಾ.ಅಬ್ದುಲ್ ಖದೀರ್
ಡಾ.ಅಬ್ದುಲ್ ಖದೀರ್
ಬೀದರ್ : ಪ್ರಸಕ್ತ ಶೈಕಣಿಕ ವರ್ಷದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಪದವಿಪೂರ್ವ ಕಾಲೇಜುಗಳಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಯ ತರಬೇತಿ ಪಡೆಯುವ 125 ಪುನರಾವರ್ತಿತ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಶಿಷ್ಯವೇತನ ನೀಡಲಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನಾರಾಯಣ ಹೃದಯಾಲಯವು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಸಹಯೋಗದೊಂದಿಗೆ ಸತತ ಮೂರನೇ ವರ್ಷವೂ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಒಟ್ಟು 125 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಿದ್ದು, ಈ ಪೈಕಿ 50 ಸ್ಥಾನಗಳು ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಉಳಿದ 75 ಸ್ಥಾನಗಳಿಗೆ ದೇಶದ ಎಲ್ಲೆಡೆಯ ಅಭ್ಯರ್ಥಿಗಳು ಹೆಸರು ನೋಂದಾಯಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಶಿಷ್ಯವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ.100ರಷ್ಟು ವಿನಾಯಿತಿ ಇರಲಿದೆ. 125 ಅಭ್ಯರ್ಥಿಗಳ ಪೈಕಿ 100 ವಿದ್ಯಾರ್ಥಿಗಳಿಗೆ ಬೀದರ್ ಹಾಗೂ 25 ವಿದ್ಯಾರ್ಥಿಗಳಿಗೆ ಕಲಬುರಗಿಯಲ್ಲಿ ತರಬೇತಿ ನೀಡಲಾಗುವುದು.ಶಾಹೀನ್ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜತೆಗೂಡಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ವರ್ಷದ ನೀಟ್‌ನಲ್ಲಿ 400ಕ್ಕೂ ಅಧಿಕ ಅಂಕ ಪಡೆದ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು, 350 ಕ್ಕೂ ಅಧಿಕ ಅಂಕ ಗಳಿಸಿದ ತೆಲಂಗಾಣದ ವಿದ್ಯಾರ್ಥಿಗಳು, 475 ಕ್ಕೂ ಹೆಚ್ಚು ಅಂಕ ಪಡೆದ ಹಾಗೂ ಕುಟುಂಬದ ಆದಾಯ ವಾರ್ಷಿಕ 5 ಲಕ್ಷ ರೂ. ಕ್ಕೂ ಕಡಿಮೆ ಹೊಂದಿರುವ ಇತರ ರಾಜ್ಯಗಳ ಅಭ್ಯರ್ಥಿಗಳು ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ ಎಂದು ಹೇಳಿದ್ದಾರೆ.
ಶಿಷ್ಯವೇತನಕ್ಕೆ ಹೆಸರು ನೋಂದಾಯಿಸಲು ಜು. 31 ಕೊನೆಯ ದಿನವಾಗಿದ್ದು, www.shaheengroup.org ನಲ್ಲಿ ಹೆಸರು ನೋಂದಾಯಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಟೊಲ್ ಫ್ರೀ ಸಂಖ್ಯೆ 18001216235 ಗೆ ಸಂಪರ್ಕಿಸಬಹುದು. ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಹೆಸರು ನೋಂದಣಿ ಹಾಗೂ ಇತರ ಮಾಹಿತಿಗೆ ಬೀದರ್ ವಿದ್ಯಾರ್ಥಿಗಳು ಸುರೇಶ್ ಚನಶೆಟ್ಟಿ (99867 92323) ಕಲ್ಬುರ್ಗಿಯ ವಿದ್ಯಾರ್ಥಿಗಳು ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ (98803 49025), ಯಾದಗಿರಿಯ ವಿದ್ಯಾರ್ಥಿಗಳು ಸಿದ್ದಪ್ಪ ಹೊಟ್ಟಿ (94809 57169), ಬಳ್ಳಾರಿಯ ವಿದ್ಯಾರ್ಥಿಗಳು ಡಾ.ನಿಷ್ಟಿರುದ್ರಪ್ಪ (93427 26398), ಕೊಪ್ಪಳದ ವಿದ್ಯಾರ್ಥಿಗಳು ಶರಣಗೌಡ ಪೊಲೀಸ್ ಪಾಟೀಲ್ (9741980328) ಹಾಗೂ ರಾಯಚೂರಿನ ವಿದ್ಯಾರ್ಥಿಗಳು ರಂಗಣ್ಣ ಪಾಟೀಲ್ (80953 92296)ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಅರ್ಹ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಕನಸು ನನಸಾಗಿಸಲು ನೀಡಲಾಗುತ್ತಿರುವ ಶಿಷ್ಯವೇತನದ ಲಾಭ ಪಡೆಯಬೇಕು ಎಂದು ಕೋರಿದ್ದಾರೆ.