ಬೀದರ್ | ಎನ್‌ಡಿಪಿಎಸ್ ಕಾಯ್ದೆಯಡಿ ವಶಪಡಿಸಿಕೊಂಡಿದ್ದ 1 ಕೋಟಿ 34 ಲಕ್ಷ ರೂ. ಕ್ಕಿಂತ ಅಧಿಕ ಮೌಲ್ಯದ ಮಾದಕ ವಸ್ತು ನಾಶ
Update: 2025-09-25 16:45 IST
ಬೀದರ್ : ಎನ್‌ಡಿಪಿಎಸ್ ಕಾಯ್ದೆಯಲ್ಲಿ ದಾಖಲಾದ ಪ್ರಕರಣದಡಿ ವಶಪಡಿಸಿಕೊಂಡಿದ್ದ 1,34,45,238 ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಗುರುವಾರ ಭಾಲ್ಕಿ ತಾಲ್ಲೂಕಿನ ಧನ್ನೂರ್ ಗ್ರಾಮದಲ್ಲಿರುವ ಇನ್ನೆರೋ ಬಯೋಟಿಕ್ ಜೈವಿಕ ತ್ಯಾಜ್ಯ ವಿಲೇವಾರಿ ಘಟಕದ ಕುಲುಮೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಗಾಂಜಾ, ಗುಳಿಗೆ, ಸಿರಫ್ ಬಾಟಲ್, MDMA, ಮಾದಕ ದ್ರವ್ಯವನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿಯೊಂದಿಗೆ ಜತೆಗೂಡಿ ನಿಯಮಾನುಸಾರವಾಗಿ ನಾಶಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.
ಸುಮಾರು 16 ಪ್ರಕರಣಗಳಲ್ಲಿ ವಶಕ್ಕೆ ಪಡೆದ ಒಟ್ಟು 1,34,45,238 ರೂ. ಮೌಲ್ಯದ 84 ಕೆ.ಜಿ ಕ್ಕಿಂತಲೂ ಹೆಚ್ಚು ಗಾಂಜಾ, ಗುಳಿಗೆ, ಸಿರಫ್ ಬಾಟಲ್ ಹಾಗೂ MDMA ಅನ್ನು ನಾಶಗೋಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.