ಬೀದರ್ | ಬಾಲ್ಯ ವಿವಾಹ ತಡೆಯುವಲ್ಲಿ ನಿರ್ಲಕ್ಷ್ಯ ವಹಿಸುವುದು ಕೂಡ ಅಪರಾಧ : ಡಿಸಿ ಶಿಲ್ಪಾ ಶರ್ಮಾ
ಬೀದರ್: ಬಾಲ್ಯ ವಿವಾಹ ತಡೆಯುವಲ್ಲಿ ನಿರ್ಲಕ್ಷ್ಯ ವಹಿಸುವುದು ಕೂಡ ಕಾನೂನು ಮೇಲ್ಪಟ್ಟ ಅಪರಾಧ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಕ್ಕಳು ಪೋಷಕರ ಒತ್ತಡ ಅಥವಾ ಆರ್ಥಿಕ ಸಮಸ್ಯೆಗಳಿಂದ ವಿವಾಹಕ್ಕೆ ಮುಂದಾಗಬಹುದು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಶಿಕ್ಷಕರು, ಗ್ರಾಮ ಪಂಚಾಯತ್ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಬಾಲ್ಯ ವಿವಾಹ ತಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಅದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಸಾರ್ವಜನಿಕರು ಕೂಡ ಬಾಲ್ಯ ವಿವಾಹ ಕಂಡುಬಂದರೆ ತಕ್ಷಣ 1098 ನಂಬರಿಗೆ ತಿಳಿಸಬೇಕು ಎಂದರು.
ಗರ್ಭಕೋಶದಲ್ಲಿ ಮಗುವಿನ ಬೆಳವಣಿಗೆ ಸೂಕ್ತವಾಗದು, ಹೆರಿಗೆ ವೇಳೆ ಸಮಸ್ಯೆಗಳು ಉಂಟಾಗುತ್ತವೆ. ಕಲ್ಯಾಣ ಮಂಟಪಗಳು, ಮದುವೆ ಪತ್ರಿಕೆ ಮುದ್ರಣ ಅಂಗಡಿಗಳು, ಪುರೋಹಿತರು ವಧು-ವರರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ, ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗಾಗಿದ್ದು, ಅದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ. ಮಕ್ಕಳ ಹಕ್ಕು ಮತ್ತು ಬಾಲ್ಯವನ್ನು ಕಾಪಾಡುವುದು ನಮ್ಮ ಧ್ಯೇಯವಾಗಿದೆ. ಈ ವರ್ಷ 50 ಗ್ರಾಮಗಳನ್ನು ಬಾಲ್ಯ ವಿವಾಹ ಮುಕ್ತ ಗ್ರಾಮಗಳನ್ನಾಗಿ ಮಾಡುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಸಂಪೂರ್ಣ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಬಸವರಾಜ ಬುಳ್ಳಾ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಮಾಹಿತಿ ನೀಡಿದರು.ಮಕ್ಕಳ ಸಹಾಯವಾಣಿ ಪೋಸ್ಟರ್ ಬಿಡುಗಡೆ ಕೂಡ ಈ ವೇಳೆ ನಡೆಯಿತು.
ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಧರ್ ಎಂ.ಎಸ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೂಪಾ ಕೋಟೆಗೌಡರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸೀಮಪ್ಪಾ ಮತ್ತು ನಾನಾ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಉಪಸ್ಥಿತರಿದ್ದರು.