ಬೀದರ್ | ಎರಡು ವರ್ಷದ ಮಗುವಿನ ಎದುರೇ ಪೋಷಕರ ಹತ್ಯೆ
ಮೃತರು
ಬೀದರ್ : ಅನೈತಿಕ ಸಂಬಂಧವನ್ನು ಶಂಕಿಸಿ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಕೊಹಿನೂರ್ ಪಹಾಡ್ ಗ್ರಾಮದ ಸಮೀಪ ಮಂಗಳವಾರ ಸಂಜೆ ನಡೆದಿರುವುದು ವರದಿಯಾಗಿದೆ.
ಕೊಲೆಯಾದ ದಂಪತಿಯನ್ನು ಜಾಫರವಾಡಿ ಗ್ರಾಮದ ನಿವಾಸಿ ರಾಜುಕುಮಾರ್ ಕಾಂತಪ್ಪ ಕೊಳಸೂರೆ (ರಾಜಕುಮಾರ್ 28) ಹಾಗೂ ಈತನ ಪತ್ನಿ ಸಾರಿಕಾ (23)ಎಂದು ಗುರುತಿಸಲಾಗಿದೆ.
ಮೃತ ರಾಜಕುಮಾರ್ ಮತ್ತು ಅದೇ ಊರಿನ ಇನ್ನೊಬ್ಬ ವಿವಾಹಿತ ಮಹಿಳೆಯ ನಡುವೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಲಾಗಿತ್ತು. ಇದರಿಂದ ಕೋಪಗೊಂಡ ಯರಂಡಗಿ ಗ್ರಾಮದ ನಿವಾಸಿ ವಿವಾಹಿತ ಮಹಿಳೆ ಅಣ್ಣನಾದ ದತ್ತಾತ್ರೇಯ ವಾಲೆ ಹಾಗೂ ಆಕೆಯ ಗಂಡನ ತಮ್ಮನಾದ ತುಕಾರಾಮ್ ಚಿಟಂಪಲ್ಲೆ ಎಂಬವರು ರಾಜಕುಮಾರ್ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ, ರಾಜಕುಮಾರ್‌ನಿಗೆ ದತ್ತಾತ್ರೇಯ ಮತ್ತು ತುಕಾರಾಮ್ ಎಂಬವರು ಕೊಲೆ ಬೆದರಿಕೆ ಹಾಕಿದ್ದರು. ಇದರಿಂದಾಗಿ ರಾಜಕುಮಾರ್ ನ ಕುಟುಂಬಸ್ಥರು ಆತನಿಗೆ ತನ್ನ ಕುಟುಂಬ ಸಹಿತ ಊರು ಬಿಟ್ಟು ಮುಂಬೈಗೆ ಹೋಗಿ ಕೆಲಸ ಮಾಡಲು ಹೇಳಿದ್ದರು ಎನ್ನಲಾಗಿದೆ.
ಕುಟುಂಬಸ್ಥರ ಸಲಹೆಯಂತೆ ರಾಜಕುಮಾರ್ ತನ್ನ ಕುಟುಂಬ ಸಹಿತ ಕೆಲಸಕ್ಕೆಂದು ಮುಂಬೈಗೆ ತೆರಳಿದ್ದನು. ಆದರೆ ಊರಲ್ಲಿರುವ ಆ ವಿವಾಹಿತ ಮಹಿಳೆಯು ರಾಜಕುಮಾರ್‌ನಿಗೆ ಕರೆ ಮಾಡಿ ನಮ್ಮಣ್ಣ ಮತ್ತು ಮೈದುನ ಇಬ್ಬರು ನಿನಗೆ ಹೊಡೆಯಲು ಮುಂಬೈಗೆ ಬಂದಿದ್ದಾರೆ. ನೀನು ಮನೆಗೆ ಬಾ ಎಂದು ಕರೆ ಮಾಡಿ ಆತನಿಗೆ ಮನೆಗೆ ಬರಲು ಹೇಳಿದ್ದರು ಎನ್ನಲಾಗಿದೆ.
ಇದರಿಂದಾಗಿ ಹೆದರಿದ ರಾಜಕುಮಾರ್ ತನ್ನ ಪತ್ನಿ ಸಾರಿಕಾ ಮತ್ತು ಅವರ ಎರಡು ವರ್ಷದ ಮಗುವಿನ ಜೊತೆಗೆ ರೈಲ್ವೆ ಮಾರ್ಗವಾಗಿ ಕಲಬುರಗಿ ಮೂಲಕ ತನ್ನ ಊರಿಗೆ ಬರುತ್ತಿರುವಾಗ ದಂಪತಿಯನ್ನು ಮಾರ್ಗಮಧ್ಯದಲ್ಲಿಯೇ ಅಡ್ಡಗಟ್ಟಿ, ಅವರ ಎರಡು ವರ್ಷದ ಮಗುವಿನ ಮುಂದೆಯೇ ಹತ್ಯೆ ಮಾಡಲಾಗಿದೆ ಎಂದು ಮೃತ ರಾಜಕುಮಾರ್‌ನ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಾಂಠಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.