ಬೀದರ್ : 7.50 ಕೆ. ಜಿ ಗಾಂಜಾ ಪತ್ತೆ ಹಚ್ಚಿದ ಪೊಲೀಸ್ ಶ್ವಾನ; ಆರೋಪಿಯ ಬಂಧನ
ಬೀದರ್ : ದೀಪಾ ಎಂಬ ಹೆಸರಿನ ಪೊಲೀಸ್ ಶ್ವಾನವೊಂದು 7.50 ಕೆ.ಜಿ ಗಾಂಜಾ ಪತ್ತೆ ಹಚ್ಚಿದ ಘಟನೆ ಶುಕ್ರವಾರ ಸಂತಪುರ್ ಪೊಲೀಸ್ ಠಾಣೆಯ ವಿಜಯನಗರ (ಬಾರ್ಡರ್) ತಾಂಡಾದಲ್ಲಿ ನಡೆದಿದ್ದು, ಒಬ್ಬನನ್ನು ಬಂಧಿಸಲಾಗಿದೆ.
ಅಂಬಾಜಿ (56) ಬಂಧಿತ ವ್ಯಕ್ತಿ. ಈತನ ಹತ್ತಿರ ಇದ್ದ ಅರ್ಧ ಕೆ.ಜಿ ಗಾಂಜಾವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆತನ ಹತ್ತಿರ ಇನ್ನು ಹೆಚ್ಚಿನ ಗಾಂಜಾ ಇರುವ ಬಗ್ಗೆ ಅನುಮಾನಗೊಂಡ ಪೊಲೀಸರು ಶ್ವಾನ ದಳದವನ್ನು ಕರೆಸಿ ಗಾಂಜಾ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ದೀಪಾ ಎಂಬ ಶ್ವಾನ ತೊಗರಿ ಹೊಟ್ಟಿನಲ್ಲಿ ಹೆಚ್ಚಿನ ಗಾಂಜಾ ಇರುವುದನ್ನು ಪತ್ತೆ ಹಚ್ಚಿದೆ ಎಂದು ತಿಳಿದು ಬಂದಿದೆ.
ಸಂತಪುರನ ಪಿಎಸ್ಐ ನಂದಕುಮಾರ್, ತಹಶೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ಎಎಸ್ಐ ಸುನಿಲಕುಮಾರ್ ಕೋರೆ, ಸಿಬ್ಬಂದಿಗಳಾದ ಕೊಟ್ರೇಶ್, ಸುಭಾಷ್, ಸಿದ್ದಣ್ಣ, ಗೌತಮ್ ಹಾಗೂ ರಾಮರೆಡ್ಡಿ ಏಕನಾಥ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಶ್ಲಾಘಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಂತಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.