×
Ad

ಬೀದರ್ | ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲನ ಪ್ರತಿಕೃತಿ ದಹಿಸಿ ಪ್ರತಿಭಟನೆ

Update: 2025-10-08 19:35 IST

ಬೀದರ್ : ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆದು ಅವಮಾನ ಮಾಡಿರುವ ವಕೀಲನ ವಿರುದ್ಧ ದೇಶದ್ರೋಹದಡಿ ಪ್ರಕರಣ ದಾಖಲಿಸಿ, ಜೀವಾವಧಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಬುಧವಾರ ಬಸವಕಲ್ಯಾಣ ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಸೇರಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಶೂ ಎಸೆದ ವಕೀಲನ ಪ್ರತಿಕೃತಿ ದಹನ ಮಾಡಿ, ಆತನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರಿಗೆ ಶೂ ಎಸೆದು ಅವಮಾನ ಮಾಡಿರುವ ವಕೀಲನ ಮೇಲೆ ಹಾಗೂ ಗ್ವಾಲಿಯರ್ ನಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನಿಸಿದ ಅನೀಲ್ ಮಿಶ್ರಾ ಎಂಬ ವಕೀಲನ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ, ಇಬ್ಬರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಲಾಯಿತು.

ಬಸವಕಲ್ಯಾಣ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬುದ್ಧ ಮತ್ತು ಡಾ.ಅಂಬೇಡ್ಕರ್ ಅನುಯಾಯಿ ಹಾಗೂ ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದ್ದಾರೆ. ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಭದ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮನುವಾದದ ಪ್ರವರ್ತಕರು ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ತನ್ನ ಶೂ ಎಸೆದಿದ್ದಾರೆ. ಇದು ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯಲ್ಲ. ನ್ಯಾಯದ, ಸಂವಿಧಾನದ ಮೇಲಿನ ದಾಳಿಯಾಗಿದೆ. ಇದು ಕೇವಲ ಶೂ ದಾಳಿಯಲ್ಲ. ಮನುವಾದದ ಮತಾಂಧರು ನಡೆಸಿದ ಸಂವಿಧಾನದ ಮೌಲ್ಯಗಳ ಮೇಲಿನ ಭಯೋತ್ಪಾದಕ ದಾಳಿಯಾಗಿದೆ ಎಂದು ಆರೋಪಿಸಲಾಗಿದೆ.

ಮುಖ್ಯನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯತೀತ ಮನಸ್ಸುಗಳು ಅವರ ಬೆಂಬಲಕ್ಕಿವೆ. ಈ ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಈ ಘಟನೆಯನ್ನು ಖಂಡಿಸಬೇಕು ಎಂದು ಮನವಿ ಮಾಡಲಾಗಿದೆ.

ಡಾ.ಅಂಬೇಡ್ಕರ್, ಭಾರತೀಯ ಸಂವಿಧಾನ, ನ್ಯಾಯಮೂರ್ತಿ ಮತ್ತು ನ್ಯಾಯಾಲಯಕ್ಕೆ ಅವಮಾನಿಸುವ ವ್ಯಕ್ತಿಗಳ ಮೇಲೆ ಕಡ್ಡಾಯವಾಗಿ ದೇಶ ದ್ರೋಹದ ಪ್ರಕರಣ ದಾಖಲಿಸಲು ಹೊಸ ಕಾನೂನು ರೂಪಿಸಬೇಕು ಎಂದು ಈ ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಡಿಎಸ್ಎಸ್ ತಾಲೂಕು ಅಧ್ಯಕ್ಷ ಪಿಂಟು ಕಾಂಬಳೆ, ವಾಯ್ಸ್ ಆಫ್ ಅಂಬೇಡ್ಕರ್ ರಾಜ್ಯಾಧ್ಯಕ್ಷ ಸುರೇಶ್ ಮೊರೆ, ಬೌದ್ಧ ಮಹಾಸಭಾ ಅಧ್ಯಕ್ಷ ಮನೋಹರ್ ಮೈಸೆ, ದೀಪಕ್ ಗಾಯಕವಾಡ್, ಸಿಕಂದರ್ ಸಿಂಧೆ, ವಿಜಯಕುಮಾರ್ ಡಾಂಗೆ, ನಗರಸಭೆ ಸದಸ್ಯ ಗಫಾರ್ ಪೆಸ್ಮಾಮ್, ಸಂಜು, ಗೌತಮ್ ಜಾಂತೆ, ಅಶೋಕ್ ಮದಾಳೆ ಹಾಗೂ ಯುವರಾಜ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News