ಬೀದರ್ | ಸಿಜೆಐ ಮೇಲೆ ಶೂ ಎಸೆದ ವಕೀಲನ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಮನವಿ
ಔರಾದ್ : ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರನ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ಬುಧವಾರ ಔರಾದ್ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ತಾಲೂಕು ಸಮಿತಿಯ ಅಧ್ಯಕ್ಷ ರಾಜಕುಮಾರ್ ಡೊಂಗರೆ ಅವರು ಮಾತನಾಡಿ, ಅ.6ರಂದು ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ನಡೆದ ಈ ಘಟನೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಶೂ ಎಸೆದ ವಕೀಲ ರಾಕೇಶ್ ಕಿಶೋರನ ಕೃತ್ಯದಿಂದ ದೇಶ ಹಾಗೂ ದೇಶದ ಸಂವಿಧಾನಕ್ಕೆ ಅಪಮಾನಿಸಿದಂತಿದೆ. ಈ ಘಟನೆಯ ಕುರಿತು ತೀವ್ರ ತನಿಖೆ ನಡೆಯಬೇಕು. ತಪ್ಪಿತಸ್ಥ ಪೂರ್ವಗ್ರಹ ಪೀಡಿತ ವಕೀಲನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಂಡರಿ ಆಡೆ, ಎಸ್ಸಿ-ಎಸ್ಟಿ ನೌಕರ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಾಜಿ ಅಮರವಾಡಿ, ಗೊಂಡ್ ನೌಕರ ಸಂಘದ ಅಧ್ಯಕ್ಷ ಗಣಪತಿ ಮೇತ್ರೆ, ಕಲ್ಯಾಣ ಕರ್ನಾಟಕ ನೌಕರ ಸಂಘದ ಅಧ್ಯಕ್ಷ ರವಿ ಡೋಳೆ, ತಾಲೂಕು ಮಟ್ಟದ ಅಧಿಕಾರಿಗಳಾದ ಬಿ.ಜೆ ರಂಗೇಶ್, ಇಮಾಲಪ್ಪ, ಅನೀಲಕುಮಾರ್ ಹಾಗೂ ಆರೋಗ್ಯ ಇಲಾಖೆಯ ಅನೀತಾ ಸೇರಿದಂತೆ ಇತರರಿದ್ದರು.