ಬೀದರ್ | ಶಶಿಕಾಂತ್ ಶೆಂಬೆಳ್ಳಿ ಅವರಿಗೆ ʼಶ್ರೀ ಕುಮಾರಸ್ವಾಮಿ ಪತ್ರಿಕಾ ಭೂಷಣʼ ಪ್ರಶಸ್ತಿ
ಬೀದರ್ : ಸಾಮಾಜಿಕ ಬದ್ಧತೆಯ ಪತ್ರಿಕಾ ಸೇವೆಗಾಗಿ ಹಿರಿಯ ಪತ್ರಕರ್ತ ಶಶಿಕಾಂತ್ ಶೆಂಬೆಳ್ಳಿ ಅವರು ಶ್ರೀ ಕುಮಾರಸ್ವಾಮಿ ಪತ್ರಿಕಾ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಹಾಶೈವ ಧರ್ಮಪೀಠದ 2025ನೇ ಸಾಲಿನ ಪತ್ರಿಕಾ ಭೂಷಣ ಪ್ರಶಸ್ತಿಗೆ ಶೆಂಬೆಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ. ಗಬ್ಬೂರಿನ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷ ಮುಕ್ಕಣ್ಣ ಕರಿಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯು ಕುಮಾರಸ್ವಾಮಿ ಪತ್ರಿಕಾ ಭೂಷಣ ಪ್ರಶಸ್ತಿಗೆ ಶಶಿಕಾಂತ್ ಶೆಂಬೆಳ್ಳಿ ಅವರನ್ನು ಆಯ್ಕೆ ಮಾಡಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠವು ಪ್ರತಿವರ್ಷವೂ ಪೀಠಾಧ್ಯಕ್ಷ ಮುಕ್ಕಣ್ಣ ಕರಿಗಾರ ಅವರ ಗುರುಗಳಾದ ಧಾರವಾಡದ ತಪೋವನದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಯವರ ಜನ್ಮದಿನೋತ್ಸವವಾದ ನೂಲ ಹುಣ್ಣಿಮೆಯ ದಿನದಂದು ಮಹಾಶೈವ ಗುರುಪೂರ್ಣಿಮೆ ಆಚರಿಸಿ, ಪತ್ರಿಕಾ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ, ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.