ಬೀದರ್ | ಮತದಾನ ಕಳ್ಳತನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ ಆರಂಭ : ಸಂಸದ ಸಾಗರ್ ಖಂಡ್ರೆ
ʼʼಸಹಿ ಸಂಗ್ರಹ ಅಭಿಯಾನ ನಂತರವೂ ಚುನಾವಣೆ ಆಯೋಗ ಮಣಿಯದಿದ್ದರೆ ಹೋರಾಟʼʼ
ಬೀದರ್: ಮತದಾನ ಕಳ್ಳತನವನ್ನು ತಡೆಗಟ್ಟಲು ಕಾಂಗ್ರೆಸ್ ಪಕ್ಷದ ವತಿಯಿಂದ ಸಹಿ ಸಂಗ್ರಹಣಾ ಅಭಿಯಾನ ಪ್ರಾರಂಭಿಸಲಾಗಿದೆ. ಇಡೀ ದೇಶದಲ್ಲಿ 5 ಕೋಟಿ ಸಹಿ ಹಾಗೂ ಬೀದರ್ ಜಿಲ್ಲೆಯಲ್ಲಿ 1 ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಸಹಿ ಅಭಿಯಾನ ನಂತರವೂ ಚುನಾವಣಾ ಆಯೋಗ ಸ್ಪಂದಿಸದಿದ್ದರೆ ರಾಷ್ಟ್ರವ್ಯಾಪಿ ಹೋರಾಟ ನಡೆಸುವುದಾಗಿ ಸಂಸದ ಸಾಗರ್ ಖಂಡ್ರೆ ಎಚ್ಚರಿಕೆ ನೀಡಿದರು.
ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪ್ರತಿ ಮತಗಟ್ಟೆಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಇದ್ದರೂ ಚುನಾವಣಾ ಆಯೋಗ ಅದನ್ನು ನೀಡುತ್ತಿಲ್ಲ. ಮಷಿನ್ ರೀಡಬಲ್ ವೋಟರ್ ಡೇಟಾವನ್ನೂ ಹಂಚಿಕೊಳ್ಳುವುದಿಲ್ಲ. ಕೊನೆಯ ಕ್ಷಣದಲ್ಲಿ ಆಡಿಷನ್–ಡಿಲೀಷನ್ ಆಗಬಾರದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಬೇಕು ಎಂದು ಆಗ್ರಹಿಸಿದರು.
ಚುನಾವಣೆ ಆಯೋಗದ ಅಧಿಕಾರಿಗಳು ಪಕ್ಷಾತೀತವಾಗಿರಬೇಕು. ಆದರೆ ಕೇಂದ್ರ ಸರ್ಕಾರ ಮತದಾನ ಕಳ್ಳತನದ ಮೂಲಕ ಜನರ ವಿಶ್ವಾಸಕ್ಕೆ ದ್ರೋಹ ಮಾಡುತ್ತಿದೆ. ದಾಖಲೆಗಳನ್ನು ನೀಡದಿರುವುದೇ ಅವರ ವಂಚನೆಗೆ ಸಾಕ್ಷಿ. ಚುನಾವಣಾ ಆಯೋಗದ ಮುಖ್ಯಸ್ಥರ ನೇಮಕದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನು ಹೊರತುಪಡಿಸಿ ಕೇಂದ್ರ ಸಚಿವರನ್ನು ಸೇರಿಸಿರುವುದು ಪ್ರಜಾಪ್ರಭುತ್ವಕ್ಕೆ ಹಾನಿಕಾರಕ ಎಂದು ಟೀಕಿಸಿದರು.
ಬಿಜೆಪಿಯ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ತಾವು ತುದಿಗಾಲಲ್ಲಿ ಬಾರದಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ ಸ್ಪಷ್ಟಪಡಿಸಿದರು.
ಬಿಜೆಪಿಯ ಕ್ಷುಲ್ಲಕ ಹೇಳಿಕೆಗಳಿಗೆ ಪ್ರತಿದಿನ ಪ್ರತಿಕ್ರಿಯೆ ನೀಡಿದರೆ ಅದು ಅನಾವಶ್ಯಕ ವಿವಾದಕ್ಕೆ ಕಾರಣವಾಗುತ್ತದೆ. ಜಿಎಸ್‌ಟಿ ಬಗ್ಗೆ ಬಿಜೆಪಿ ಸಂಭ್ರಮಿಸುತ್ತಿರುವುದರ ಕ್ರೆಡಿಟ್ ನಮಗೇ ಸಿಗಬೇಕು ಎಂಬುದು ನಿಜ. ಅದರ ಬಗ್ಗೆ ಬೇಗನೆ ಪತ್ರಿಕಾಗೋಷ್ಠಿ ನಡೆಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡ್, ಹಣಮಂತರಾವ್ ಚೌವ್ಹಾಣ್, ಜಾನ್ ವೇಸ್ಲಿ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, NSUI ಮುಂಚೂಣಿ ಘಟಕದ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.