ಬೀದರ್ | ಮನಸು ಬದಲಾಯಿಸಿಕೊಂಡು ಒಳ್ಳೆಯ ಜೀವನ ನಡೆಸಲು ರೌಡಿಗಳಿಗೆ ಎಸ್ಪಿ ಪ್ರದೀಪ್ ಗುಂಟಿ ಸಲಹೆ
ಬೀದರ್ : ಇಂದು ರೌಡಿ ಪರೇಡ್ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು, ಮನಸು ಬದಲಾಯಿಸಿಕೊಂಡು ಒಳ್ಳೆ ಜೀವನ ನಡೆಸಲು ರೌಡಿಗಳಿಗೆ ಸಲಹೆ ನೀಡಿದರು.
ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ರೌಡಿ ಪರೇಡ್ ನಲ್ಲಿ ಮಾತನಾಡಿದ ಅವರು, 986 ರೌಡಿ ಶೀಟರ್ ಗಳಲ್ಲಿ ಕೇವಲ 388 ಜನ ರೌಡಿಗಳು ಮಾತ್ರ ಹಾಜರಾಗಿದ್ದಾರೆ. ಇದರಿಂದಾಗಿ ಬರುವ ಶುಕ್ರವಾರ ಮತ್ತೆ ರೌಡಿಶೀಟರ್ ಗಳ ಪರೇಡ್ ನಡೆಸಲಾಗುವುದು. ಇಂದು ಗೈರಾದ ಎಲ್ಲ ರೌಡಿಗಳು ಶುಕ್ರವಾರದಂದು ಕಡ್ಡಾಯವಾಗಿ ಹಾಜರಾಗುವಂತೆ ಸಂಬಂಧಪಟ್ಟ ಠಾಣೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡಿದರೆ ನಾವು ಯಾರನ್ನೂ ಬಿಡುವುದಿಲ್ಲ. ಯಾರಿಗಾದ್ರೂ ಶಸ್ತ್ರಾಸ್ತ್ರ ತೆಗೆದುಕೊಂಡು ಓಡಾಡಬೇಕು ಎಂಬ ಆಸೆ ಇದ್ದರೆ ಅದನ್ನು ಈಗಲೇ ಬಿಟ್ಟು ಬಿಡಿ. ನಿಮ್ಮ ಮೇಲೆ ರೌಡಿಶೀಟ್ ಇದ್ದುದರಿಂದ ಅದು ನಿಮಗಷ್ಟೇ ತೊಂದರೆಯಲ್ಲ ನಿಮ್ಮ ಕುಟುಂಬದವರಿಗೂ ಕೂಡ ತೊಂದರೆಯಾಗುತ್ತದೆ ಎಂದು ತಿಳುವಳಿಕೆ ಹೇಳಿದರು.
ನಿಮ್ಮ ಮಕ್ಕಳು ಹುದ್ದೆ ಪಡೆದರೆ, ಬೇರೆ ಬೇರೆ ಕಡೆಗೆ ಕಾಲೇಜುಗಳಲ್ಲಿ ಸೇರಿದರೆ ಅವರಿಗೂ ಕೂಡ ತೊಂದರೆಯಾಗುತ್ತದೆ. ಹಾಗಾಗಿ ನೀವು ಮನಸು ಬದಲಾಯಿಸಿಕೊಂಡು ನಿಮ್ಮ ಮೇಲಿನ ರೌಡಿ ಶೀಟರ್ ಇದ್ದದ್ದು ತೆಗೆದುಕೊಂಡು ಒಳ್ಳೆ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಚಂದ್ರಕಾಂತ್ ಪೂಜಾರಿ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.