×
Ad

ಬೀದರ್ | ಮಕ್ಕಳ ಮೇಲಿನ ಮೊಬೈಲ್ ಪರಿಣಾಮಗಳ ಕುರಿತು 'ಶಾಹೀನ್' ಸಂಸ್ಥೆಯಿಂದ ಸಮೀಕ್ಷೆ: ಡಾ.ಅಬ್ದುಲ್ ಖದೀರ್

"ಮಹಿಳಾ ಸುರಕ್ಷತೆ, ಸ್ವಚ್ಛತೆ ಹಾಗೂ ಮಕ್ಕಳ ಏಕಾಗ್ರತೆ ಕುರಿತು ಅಧ್ಯಯನ"

Update: 2026-01-13 20:50 IST

ಬೀದರ್: ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಮಕ್ಕಳ ಮೇಲೆ ಮೊಬೈಲ್ ಬಳಕೆಯಿಂದ ಆಗುತ್ತಿರುವ ಪರಿಣಾಮಗಳು, ಮಹಿಳೆಯರ ಸುರಕ್ಷತೆ ಮತ್ತು ಸ್ವಚ್ಛತೆ ಕುರಿತು ಬೃಹತ್ ಸಮೀಕ್ಷೆಯನ್ನು ಕೈಗೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.14 ರಂದು ಬೆಳಿಗ್ಗೆ 9 ಗಂಟೆಗೆ ಈ 15 ದಿನಗಳ ಸಮೀಕ್ಷೆ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಶಾಹೀನ್ ಕಾಲೇಜಿನ ಸುಮಾರು 200 ವಿದ್ಯಾರ್ಥಿಗಳು ಮನೆ ಮನೆಗೆ ಭೇಟಿ ನೀಡುವ ಮೂಲಕ ಹಾಗೂ ಸಂಸ್ಥೆಯ ವೆಬ್‌ಸೈಟ್‌ನಲ್ಲಿರುವ ಲಿಂಕ್ ಬಳಸಿ ಆನ್‌ಲೈನ್ ಮೂಲಕ ಏಕಕಾಲದಲ್ಲಿ ದತ್ತಾಂಶ ಸಂಗ್ರಹಿಸಲಿದ್ದಾರೆ. ಇದು ಸಂಪೂರ್ಣವಾಗಿ ಶೈಕ್ಷಣಿಕ ಸ್ವರೂಪದ ಸರ್ವೆಯಾಗಿದ್ದು, ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಶೇಷವಾಗಿ 12 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಮತ್ತು ರೀಲ್ಸ್‌ಗಳಿಗೆ ಮಾರುಹೋಗುತ್ತಿರುವುದರಿಂದ ಅವರಲ್ಲಿ ಏಕಾಗ್ರತೆ ಮತ್ತು ತಾಳ್ಮೆ ಕ್ಷೀಣಿಸುತ್ತಿದೆ. ಶಾಲಾ ಕೊಠಡಿಗಳಲ್ಲಿ ಒಂದು ನಿಮಿಷವೂ ಗಮನವಿಟ್ಟು ಪಾಠ ಕೇಳದ ಸ್ಥಿತಿಗೆ ಮಕ್ಕಳ ಮನಸ್ಸು ತಲುಪಿದೆ. ಮಕ್ಕಳಲ್ಲಿ ಅಸಹನೆ ಮತ್ತು ಕೋಪ ಹೆಚ್ಚುತ್ತಿದ್ದು, ಈ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ಡಾ. ಅಬ್ದುಲ್ ಖದೀರ್ ಕಳವಳ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯ ಸಮಯದಲ್ಲಿ ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳು, ವರದಕ್ಷಿಣೆ ವಿರೋಧಿ ಕಾಯ್ದೆ ಹಾಗೂ ತುರ್ತು ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಬೀದರ್‌ನ 'ಅಕ್ಕಪಡೆ'ಯ ಕಾರ್ಯವೈಖರಿಯ ಬಗ್ಗೆಯೂ ಜನರಿಗೆ ತಿಳಿಸಿಕೊಡಲಾಗುತ್ತದೆ. ಇದರೊಂದಿಗೆ ಕಸ ವಿಲೇವಾರಿ, ಹಸಿ ಮತ್ತು ಒಣ ಕಸದ ಪ್ರತ್ಯೇಕೀಕರಣ ಹಾಗೂ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಮಹಾನಗರ ಪಾಲಿಕೆಯ ಅಭಿಯಾನಕ್ಕೆ ಪೂರಕವಾಗಿ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಶಾಹೀನ್ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ಬಿಎ, ಬಿಸಿಎ, ಬಿಕಾಂ, ಬಿಎಸ್ಸಿ ಓದುತ್ತಿರುವ ಸುಮಾರು 200 ವಿದ್ಯಾರ್ಥಿಗಳು ಸರ್ವೆಯಲ್ಲಿ ಪಾಲ್ಗೊಳ್ಳುವರು. ಪೋಷಕರಿಂದ ಬರುವ ಉಪಯುಕ್ತ ಸಲಹೆಗಳು ಮತ್ತು ಸಂಗ್ರಹವಾಗುವ ವಾಸ್ತವಿಕ ಮಾಹಿತಿಯನ್ನು ಮುಂದಿನ ಶೈಕ್ಷಣಿಕ ಅಧ್ಯಯನಗಳಿಗೆ ಆಧಾರವಾಗಿ ಬಳಸಿಕೊಳ್ಳಲಾಗುವುದು ಎಂದು ಡಾ. ಅಬ್ದುಲ್ ಖದೀರ್ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News