ಬೀದರ್ | ಶಿಕ್ಷಕರು ಅಭಿವೃದ್ಧಿಯ ರೂವಾರಿಗಳು: ಶಾಸಕ ಪ್ರಭು ಚೌವ್ಹಾಣ್
ಬೀದರ್ : ಶಿಕ್ಷಕರಿಗೆ ದೇಶದಲ್ಲಿ ಬಹುದೊಡ್ಡ ಸ್ಥಾನಮಾನ ನೀಡಲಾಗಿದೆ. ಮಕ್ಕಳಿಗೆ ವಿದ್ಯೆ, ಬುದ್ದಿ ಕಲಿಸಿ ಉಜ್ವಲ ಭವಿಷ್ಯ ರೂಪಿಸುವ ಅವರು ಅಭಿವೃದ್ಧಿಯ ರೂವಾರಿಗಳಾಗಿದ್ದಾರೆ ಎಂದು ಶಾಸಕ ಪ್ರಭು ಚೌವ್ಹಾಣ್ ಅವರು ತಿಳಿಸಿದರು.
ಇಂದು ಶಾಲಾ ಶಿಕ್ಷಣ ಇಲಾಖೆಯಿಂದ ಔರಾದ್ (ಬಿ) ಪಟ್ಟಣದ ಡಾ.ಗುರುಪಾದಪ್ಪ ಕಲ್ಯಾಣ ಮಂಟಪದಲ್ಲಿ ನಡೆದ 2025-26ನೇ ಸಾಲಿನ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಔರಾದ(ಬಿ) ವಿಧಾನಸಭಾ ಕ್ಷೇತ್ರ ಸಾಕಷ್ಟು ಸುಧಾರಣೆ ಕಂಡಿದೆ. ಇದರಲ್ಲಿ ಶಿಕ್ಷಕರ ಪಾತ್ರವೂ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿದ್ದು, ಶಿಕ್ಷಣ ಕ್ಷೇತ್ರ ಸಾಕಷ್ಟು ಸುಧಾರಿಸಿದೆ. ಫಲಿತಾಂಶ ಸುಧಾರಣೆಯಲ್ಲಿ ಇನ್ನಷ್ಟು ಪ್ರಯತ್ನ ಹಾಕಬೇಕು. ಮುಂಬರುವ ದಿನಗಳಲ್ಲಿ ಔರಾದ್ (ಬಿ) ಹಾಗೂ ಕಮಲನಗರ್ ತಾಲ್ಲೂಕುಗಳು ಫಲಿತಾಂಶದಲ್ಲಿ ನಂ.1 ಮಾಡಬೇಕೆಂಬ ಅಭಿಲಾಷೆ ಇದೆ. ಶಿಕ್ಷಕರು ಇದಕ್ಕೆ ಸಹಕರಿಸಿ, ಶೇ.100 ರಷ್ಟು ಫಲಿತಾಂಶ ಕೊಡುವುದಾಗಿ ಪ್ರಮಾಣ ಮಾಡಬೇಕು ಎಂದರು.
2009ರಿಂದ ನಿರಂತರವಾಗಿ ಶಿಕ್ಷಕರನ್ನು ಸನ್ಮಾನಿಸುತ್ತಾ ಬರುತ್ತಿದ್ದು, ಯಾವುದೇ ಅಡ್ಡಿ ಆತಂಕ ಬಂದರೂ ಶಿಕ್ಷಕರು, ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕೆಲಸ ನಿಲ್ಲಿಸುವುದಿಲ್ಲ. ಜೀವಮಾನ ಇರುವವರೆಗೆ ಈ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತೇನೆ. ನಾನು ಮಣ್ಣಿನ ಮಗನಾಗಿದ್ದು, ಅಡ್ಡಿಗಳು ಬಂದಷ್ಟು ಗಟ್ಟಿಯಾಗುತ್ತೇನೆ. ಮುಂದಿನ ದಿನಗಳಲ್ಲಿ ಶಿಕ್ಷಕರ ದಿನಾಚರಣೆ ಮತ್ತಷ್ಟು ಅದ್ದೂರಿಯಾಗಿ ಮಾಡಿ ಶಿಕ್ಷಕರನ್ನು ಗೌರವಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಠಾಣಾಕುಶನೂರ್ ಮಠದ ಸಿದ್ಧಲಿಂಗ್ ಸ್ವಾಮಿ, ಭಾಲ್ಕಿಯ ಮಹಾಲಿಂಗ ಸ್ವಾಮಿ, ಹೆಡಗಾಪೂರ್ ಮಠದ ಕೇದಾರನಾಥ್ ಶಿವಾಚಾರ್ಯ, ಗುಡಪಳ್ಳಿ ಮಠದ ಚಂದ್ರಶೇಖರ್ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು.
ಔರಾದ್ (ಬಿ) ಪಟ್ಟಣ ಪಂಚಾಯತ್ ಅಧ್ಯಕ್ಷ ಸರುಬಾಯಿ ಘೂಳೆ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗುರು ಪ್ರಸಾದ್, ತಹಸೀಲ್ದಾರ್ ಮಹೇಶ್ ಪಾಟೀಲ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಹಣಮಂತರಾಯ್ ಕೌಟಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ್, ಪಿ.ಎಂ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ಸಹಾಯಕ ನಿರ್ದೇಶಕ ಧೂಳಪ್ಪ ಮಳೆನೂರ್, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್ ರಾಠೋಡ್, ಯಶವಂತ್ ಡೊಂಬಾಳೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಬಿರಾದಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ ಮಾಲಿಪಾಟೀಲ್ ಹಾಗೂ ಜಿಲ್ಲಾ ಕಾರ್ಯದರ್ಶಿ ಪ್ರಭುಲಿಂಗ್ ತೂಗಾವೆ ಸೇರಿದಂತೆ ತಾಲ್ಲೂಕಿನ ಶಿಕ್ಷಕರು ಉಪಸ್ಥಿತರಿದ್ದರು.