ಬೀದರ್ | ಸಮಾಜದಲ್ಲಿ ಶಾಂತಿ, ಏಕತೆ ಹೆಚ್ಚಿಸುವಲ್ಲಿ ಮಾಧ್ಯಮಗಳ ಪಾತ್ರ ಅಪಾರ : ಬಿ.ಕೆ.ಪ್ರತಿಮಾ ಬಹೆನ್ ಜಿ
ಬೀದರ್: ಸಮಾಜದಲ್ಲಿ ಶಾಂತಿ, ಏಕತೆ ಹಾಗೂ ವಿಶ್ವಾಸ ಹೆಚ್ಚಿಸುವಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ ಎಂದು ಪ್ರಜಾಪಿತಾ ಬ್ರಹ್ಮಾಕುಮಾರೀಸ್ ಈಶ್ವರಿ ವಿಶ್ವವಿದ್ಯಾಲಯದ ಪಾವನಧಾಮದ ಸಂಚಾಲಕಿ ಬಿ.ಕೆ.ಪ್ರತಿಮಾ ಬಹೆನ್ ಜಿ ಅವರು ನುಡಿದರು.
ನಗರದ ಜನವಾಡ ರಸ್ತೆಯಲ್ಲಿರುವ ಬ್ರಹ್ಮಕುಮಾರೀಸ್ ಪಾವನಧಾಮ ಕೇಂದ್ರದ ಅವರಣದಲ್ಲಿ ನಡೆಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಏಕತೆ, ವಿಶ್ವಾಸ, ಸುಖ ಸ್ಥಾಪನೆ ಮಾಡಬೇಕಿದೆ. ನಮ್ಮ ನೆರಳು ಯಾವ ರೀತಿ ನಮ್ಮನ್ನು ಹಿಂಬಾಲಿಸುತ್ತದೆಯೋ ಅದೇ ರೀತಿ ಸುಖ ಶಾಂತಿಯು ನಮ್ಮ ಹಿಂದೆ ಬರುತ್ತವೆ. ಆದರೆ ಅದು ನಮ್ಮನ್ನು ಹಿಂಬಾಲಿಸುವಂತಹ ಕಾರ್ಯ ನಾವು ಮಾಡಬೇಕಾಗಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ನಿತ್ಯ ಒತ್ತಡದಲ್ಲಿ ಬದುಕುವಂತಾಗಿದೆ. ಆರೋಗ್ಯದ ಕಡೆ ಅವರ ನಿಗಾ ಇಲ್ಲದ ಕಾರಣ ಹೃದಯಘಾತದಂತಹ ಭೀಕರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕೇಂದ್ರದ ಹಿರಿಯ ರಾಜಯೋಗ ಶಿಕ್ಷಕಿ ಗುರುದೇವಿ ಅಕ್ಕ, ಬಿ.ಕೆ.ಮಹಾನಂದಾ ಅಕ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸುಳ್ಳೊಳ್ಳಿ, ಕಲಾವಿದೆ ಶೀತಲ್ ಪಾಂಚಾಳ್, ಬಿ.ಕೆ.ಭಾಗ್ಯಶ್ರೀ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ ಹಾಗೂ ಕೇಂದ್ರದ ಎಲ್ಲ ಸಹೋದರ, ಸಹೋದರಿಯರು ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು.