ಬೀದರ್ | ಮಹಾತ್ಮ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮತಗಳ್ಳತನ ನಡೆದಿದೆ : ಸೋಮನಾಥ್ ಪಾಟೀಲ್
ಬೀದರ್ : ಮಹಾತ್ಮ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮತಗಳ್ಳತನ ನಡೆದಿದೆ. ಕಾರ್ಖಾನೆಯಲ್ಲಿನ ಅಕ್ರಮ ಚುನಾವಣೆ ತಡೆಯುವುದಕ್ಕಾಗಿ ನಾವು ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಅವರು ಹೇಳಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಎನ್ ಎಸ್ ಎಸ್ ಕೆ ಚುನಾವಣೆೆಗೆ ಕಲಬುರಗಿ ಉಚ್ಚ ನ್ಯಾಯಾಲಯ ತಡೆ ನೀಡಿದೆ. ಎಮ್ ಜಿ ಎಸ್ ಎಸ್ ಕೆ ಕಾರ್ಖಾನೆಯಲ್ಲಿನ ಅಕ್ರಮ ಚುನಾವಣೆ ತಡೆಯಲು ಸಹ ನಾವು ಕೋರ್ಟ್ ಮೊರೆ ಹೋಗಿದ್ದೇವು. ಆದರೆ ಈ ಕಾರ್ಖಾನೆಯ ಚುನಾವಣೆಗೆ ತಡೆ ನೀಡದೆ, ಚುನಾವಣೆ ನಡೆದರೂ ಫಲಿತಾಂಶ ಮೇಲೆ ರಿಟ್ ಪಿಟಿಶನ್‌ಗೆ ಅನುಮತಿ ನೀಡುವ ಮೂಲಕ ಕೋರ್ಟ್ ಅಕ್ರಮ ಮತದಾನ ಹತ್ತಿಕ್ಕಲು ಪ್ರಯತ್ನಿಸಿರುವುದು ಸಂತೋಷದ ವಿಷಯ ಎಂದರು.
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಮಹಾತ್ಮ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಒಂದೆ ಕುಟುಂಬ ನಡೆಸಿಕೊಂಡು ಬರುತ್ತಿದೆ. ಬೀದರ್ ನಲ್ಲಿ ಓಟ್ ಚೋರಿ ಕಾಂಗ್ರೆಸ್ ನವರಿಂದಲೇ ನಡೆಯುತ್ತಿದೆ ಎಂದು ಆರೋಪಿಸಿದರು.
ಎನ್ ಎಸ್ ಎಸ್ ಕೆ ಕಾರ್ಖಾನೆ ಮಾದರಿಯಂತೆ ಎಮ್ ಜಿ ಎಸ್ ಎಸ್ ಕೆ ಯಲ್ಲಿಯೂ ಚುನಾವಣೆಯ ಮತದಾನ ಪಟ್ಟಿಯಲ್ಲಿ ಅಕ್ರಮ ಹೆಸರು ಸೇರಿಸಲಾಗಿದೆ. ಭಾಲ್ಕಿ ತಾಲೂಕಿನ ನೇಳಗಿಯ ಅಮೃತ್ ಅವರು ಯಾವುದೇ ಕಬ್ಬು ಬೆಳೆಯಲ್ಲ. ಅವರು ಹೈದರಾಬಾದ್ ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಆದರೂ, ಅವರ ಹೆಸರು ಕಾರ್ಖಾನೆಯ ಮತದಾನ ಪಟ್ಟಿಯಲ್ಲಿದೆ. ಹಾಗೆಯೇ ಕಣಜಿ ಗ್ರಾಮದ ಕಮಲಾಬಾಯಿ ಅವರು ಮೃತಪಟ್ಟು ಐದು ವರ್ಷವಾಗಿದೆ. ಆದರೂ ಅವರ ಹೆಸರು ಮತದಾನ ಪಟ್ಟಿಯಲ್ಲಿರುವುದು ದೊಡ್ಡ ದುರಂತ ಎಂದರು.
ಮಹಾತ್ಮ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಗೆ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಸ್ಪರ್ಧೆಗಿಳಿಸಲಾಗಿದ್ದು, ಸಾಮಾನ್ಯ ಕ್ಷೇತ್ರದಿಂದ ಭೀಮರಾವ್, ರಾಜೇಂದ್ರ ಹಾಗೂ ಜ್ಞಾನೋಬಾ, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ದಾಕ್ಷಾಯಣಿ ಪೋಲಿಸ್ ಪಾಟೀಲ್ ಹಾಗೂ ಸರೋಜನಿ ಹಾಗೂ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಧನರಾಜ್ ಅವರನ್ನು ಕಣಕ್ಕಿಳಿಸಲಾಗಿದೆ. ಎಮ್ ಜಿ ಎಸ್ ಎಸ್ ಕೆಯ ಮತದಾರರು ಕಾರ್ಖಾನೆಯಲ್ಲಿನ ಭ್ರಷ್ಟಾಚಾರ ತಡೆಯಲು ನಮ್ಮ ಈ ಆರು ಜನ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ ಗುರುನಾಥ್ ಜ್ಯಾಂತಿಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರ ಸಭೆ ಸದಸ್ಯ ಶಶಿ ಹೊಸಳ್ಳಿ, ಜಿಲ್ಲಾ ಕಾರ್ಯದರ್ಶಿ ರಾಜಕುಮಾರ್ ನೆಮತಾಬಾದ್, ವೀರು ದಿಗ್ವಾಲ್ ಹಾಗೂ ಶ್ರೀನಿವಾಸ್ ಚೌಧರಿ ಇದ್ದರು.