ಬೀದರ್ | ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅರ್ಹರು ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು : ಡಾ.ಗಿರೀಶ್ ಬದೋಲೆ
ಬೀದರ್: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅರ್ಹ ಶಿಕ್ಷಕರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಹೇಳಿದರು.
ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2026ರಲ್ಲಿ ನಡೆಯಲಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸುವುದು ಅತ್ಯಂತ ಅಗತ್ಯ. ಚುನಾವಣಾ ಆಯೋಗವು ನಿಗದಿಪಡಿಸಿದ ವೇಳಾಪಟ್ಟಿಯ ಪ್ರಕಾರ ನವೆಂಬರ್ 6 ಮತದಾರರ ನೋಂದಣಿಗೆ ಕೊನೆಯ ದಿನ ಎಂದು ತಿಳಿಸಿದರು.
ಅರ್ಹತಾ ಮಾನದಂಡಗಳು :
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸುವವರು ಭಾರತೀಯ ಪ್ರಜೆಯಾಗಿರಬೇಕು ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಶಾಶ್ವತ ನಿವಾಸಿಯಾಗಿರಬೇಕು. 2025ರ ನವೆಂಬರ್ 1ರ ಒಳಗೆ ಕಳೆದ 6 ವರ್ಷಗಳಲ್ಲಿ ಕನಿಷ್ಠ 3 ವರ್ಷಗಳ ಕಾಲ ಪ್ರೌಢಶಾಲೆ ಅಥವಾ ಅದರ ಮೇಲಿನ ಹಂತದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವುದು ಕಡ್ಡಾಯ.
ಅರ್ಹ ಶಿಕ್ಷಕರು ಅರ್ಜಿಯ ನಮೂನೆ–19 ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಕಾರ್ಯಾವಧಿಯ ದೃಢೀಕರಣವನ್ನು ಅನುಬಂಧ–2 ನಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ಪಡೆಯಬೇಕು. ಜೊತೆಗೆ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್, ಬಿಳಿ ಹಿನ್ನೆಲೆಯೊಂದಿಗೆ ಮುಂಭಾಗದಿಂದ ತೆಗೆಯಲಾದ ಬಣ್ಣದ ಪಾಸ್‌ಪೋರ್ಟ್ ಅಳತೆಯ (4.5 ಸೆ.ಮೀ. x 3.5 ಸೆ.ಮೀ.) ಸಹಿ ಮಾಡಿದ ಇತ್ತೀಚಿನ ಫೋಟೋ ಅಂಟಿಸಬೇಕು.
ನೋಂದಣಿ ಪ್ರಕ್ರಿಯೆ :
ಪ್ರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ತಮ್ಮ ಸಂಸ್ಥೆಯಲ್ಲಿ ವ್ಯಾಪಕ ಪ್ರಚಾರ ನಡೆಸಿ ಎಲ್ಲ ಅರ್ಹ ಶಿಕ್ಷಕರು ಹೆಸರು ನೋಂದಾಯಿಸಿಕೊಳ್ಳುವಂತೆ ಕ್ರಮವಹಿಸಬೇಕು. ತಾಲ್ಲೂಕು ಮಟ್ಟದಲ್ಲಿ ಗ್ರೇಡ್–2 ತಹಸೀಲ್ದಾರರನ್ನು ಗುರುತಿಸಿದ ಅಧಿಕಾರಿಗಳಾಗಿ ನೇಮಿಸಲಾಗಿದ್ದು, ಅವರ ಕಚೇರಿಗಳಲ್ಲಿ ಅರ್ಜಿ ನಮೂನೆಗಳು ಲಭ್ಯವಿವೆ. ಅರ್ಜಿಗಳನ್ನು ಆನ್‌ಲೈನ್ ಮೂಲಕವೂ ಡೌನ್‌ಲೋಡ್ ಮಾಡಿ ಸಲ್ಲಿಸಬಹುದು ಎಂದು ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಮತದಾರರ ನೋಂದಣಿ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಮೇಲ್ವಿಚಾರಣಾಧಿಕಾರಿಯಾಗಿ, ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಎಲ್ಲಾ ಅರ್ಹ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಕರ ಸಕ್ರಿಯ ಭಾಗವಹಿಸುವಿಕೆ ಖಚಿತವಾಗುತ್ತದೆ ಎಂದು ಡಾ.ಬದೋಲೆ ಹೇಳಿದರು.
ಈ ಸಂದರ್ಭದಲ್ಲಿ ಮಾಸ್ಟರ್ ಟ್ರೇನರ್ ಗೌತಮ್ ಅರಳಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ್ ಶಹಬಾದಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸುಳ್ಳೊಳ್ಳಿ, ಶಾಲಾ ಶಿಕ್ಷಣ ಇಲಾಖೆಯ ಹಾಗೂ ಬೀದರ್ ವಿಶ್ವವಿದ್ಯಾಲಯದ ಅಧಿಕಾರಿಗಳು, ತಾಲೂಕು ಪಂಚಾಯತ್ ಇಒಗಳು ಮತ್ತು ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.