ಬೀದರ್ | ಪ್ರತಾಪೂರ್ ಗ್ರಾಮ ಪಂಚಾಯತಿಯ ಇಂದಿರಾನಗರದಲ್ಲಿ ಹದಗೆಟ್ಟ ರಸ್ತೆ ದುರುಸ್ಥಿಗೆ ಗ್ರಾಮಸ್ಥರ ಒತ್ತಾಯ
ಬೀದರ್: ಬಸವಕಲ್ಯಾಣ ತಾಲೂಕಿನ ಪ್ರತಾಪೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾನಗರದ ವಾರ್ಡ್ ಸಂಖ್ಯೆ-2 ರಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರು ತಕ್ಷಣ ದುರಸ್ತಿ ಮಾಡುವಂತೆ ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ಕೆಂಪು ಮಣ್ಣು ಹಾಕಲಾಗಿರುವುದರಿಂದ ವಾಹನಗಳು ಸಂಚರಿಸುವಾಗ ಮೊಣಕಾಲು ಮಟ್ಟದ ತಗ್ಗು ಬಿದ್ದು, ಜನರಿಗೆ ಸಂಚಾರವೇ ಕಷ್ಟವಾಗುತ್ತಿದೆ. ಜೊತೆಗೆ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯೇ ಇಲ್ಲದಿರುವುದರಿಂದ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹಲವು ಬಾರಿ ಪಂಚಾಯತಿಗೆ ಮಾಹಿತಿ ನೀಡಿದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಚುನಾವಣೆ ಸಮಯದಲ್ಲಿ ರಸ್ತೆ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ ಜನಪ್ರತಿನಿಧಿಗಳು ಆಯ್ಕೆಯಾದ ನಂತರ ಇಲ್ಲಿಗೆ ಬಾರದೆ ಮರೆತಿದ್ದಾರೆ. ಶೀಘ್ರದಲ್ಲೇ ರಸ್ತೆ ನಿರ್ಮಾಣ ನಡೆಯದಿದ್ದರೆ ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.