ಬೀದರ್ | ಸಿದ್ದರಾಮಯ್ಯ ಅವರಿಗೆ ರಾಜಕೀಯ ಮರುಜೀವ ನೀಡಿದ್ದು ನಾವೇ : ಜ್ಞಾನಪ್ರಕಾಶ್ ಸ್ವಾಮಿ
ಬೀದರ್ : ಸಿದ್ದರಾಮಯ್ಯನವರ ರಾಜಕೀಯ ಇತಿಹಾಸಕ್ಕೆ ಮುನ್ನುಡಿ ಬರೆದು ಅವರಿಗೆ ಮರುಜೀವ ನೀಡಿದವರು ನಾವಾಗಿದ್ದೇವೆ. ಯಾಕೆಂದರೆ 257 ಓಟುಗಳಿಂದ ಅವತ್ತು ನಾವು ಗೆಲ್ಲಿಸಲಿಲ್ಲ ಎಂದರೆ ಸಿದ್ದರಾಮಯ್ಯನವರು ಎರಡು ಬಾರಿ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವೆ ಇರಲಿಲ್ಲ. ನಮ್ಮನ್ನೇ ಅವರು ಪ್ರವರ್ಗ (ಬಿ) ನಲ್ಲಿ ಸೇರಿಸಿದ್ದಾರೆ. ಕ್ಯಾಬಿನೆಟ್ ನಲ್ಲಿ ಪ್ರವರ್ಗ (ಎ) ವಿಥ್ ಡ್ರಾ ಮಾಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಅಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮಿ ಅವರು ಎಚ್ಚರಿಸಿದರು.
ರವಿವಾರ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆದ “ಒಳಮೀಸಲಾತಿ ವರದಿಯ ಒಳಸಂಚು” ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, “ಅಂಬೇಡ್ಕರ್ ಸಂವಿಧಾನದ ಶಕ್ತಿಯನ್ನು ಇಡೀ ರಾಜ್ಯಕ್ಕೆ ತೋರಿಸೋಣ. ಯಾರ ಪಾಲು ಎಷ್ಟು ಇದೆಯೋ ಅಷ್ಟೇ ಪಡೆಯಬೇಕು, ಆದರೆ ನಮ್ಮನ್ನು ತಲೆ ಬಗ್ಗಿಸುವ ಕೆಲಸ ಮಾಡಿದರೆ ನೀವು ಉಳಿಯುವುದಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾಗಮೋಹನದಾಸ್ ವರದಿಯ ಪ್ರಕಾರ ಬಲಗೈ ಸಮುದಾಯದ ಜನಸಂಖ್ಯೆ 60 ಸಾವಿರ ಹೆಚ್ಚು ಇದೆ. ಹಾಗಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು. ಆದರೆ ಸರ್ಕಾರ ನಮ್ಮ ಸಂಖ್ಯೆಯನ್ನು ಪರಿಗಣಿಸದೆ, ಕುಗ್ಗಿಸುವ ಹುನ್ನಾರ ನಡೆಸಿದೆ,” ಎಂದು ಆರೋಪಿಸಿದರು.
ಈ ಸಮೀಕ್ಷೆಯಲ್ಲಿ 8 ಲಕ್ಷ ಜನ ಹೊರಗುಳಿದಿದ್ದಾರೆ. 2.70 ಲಕ್ಷ ಜನರು ತಮ್ಮ ಜಾತಿಯನ್ನು ಹೇಳದೆ ಹಿಂಜರಿಕೆ ತೋರಿದ್ದಾರೆ. ಹುದ್ದೆಯಲ್ಲಿರುವ ಬಲಗೈ ಸಮುದಾಯದ ಜನರು ತಮ್ಮ ಜಾತಿಯನ್ನು ಹೇಳಲು ಹೆದರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಡಿ.ಚಂದ್ರಶೇಖರಯ್ಯ ಅವರು ಮಾತನಾಡಿ, “ನಾಗಮೋಹನದಾಸ್ ಅವರ ವರದಿ ಲೋಪದೋಷಗಳಿಂದ ಕೂಡಿದ್ದು, ಬಲಗೈ ಸಮುದಾಯದ ಜನಸಂಖ್ಯೆಯನ್ನು ಬೇರೆ ಬೇರೆ ಗುಂಪುಗಳಾಗಿ ವಿಭಜಿಸಿದೆ. ಪೂರ್ವಗ್ರಹಪೀಡಿತರಾಗಿ ಅವರು ಅಂಕಿಅಂಶಗಳನ್ನು ತಪ್ಪಾಗಿ ಅರ್ಥೈಸಿದ್ದಾರೆ,” ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಅನಿಲಕುಮಾರ್ ಬೆಲ್ದಾರ್, ರಮೇಶ್ ಡಾಕುಳಗಿ, ಶ್ರೀಪತರಾವ್ ದೀನೆ, ಶಿವಕುಮಾರ್ ನಿಲಿಕಟ್ಟಿ, ಬಾಬುರಾವ್ ಪಾಸ್ವಾನ್, ಪ್ರದೀಪ್ ನಾಟೆಕರ್, ಪ್ರದೀಪ್ ಜಂಜಿರೆ ಹಾಗೂ ಸಂದೀಪ್ ಕಾಂಟೆ ಸೇರಿದಂತೆ ಬಲಗೈ ಸಮುದಾಯದ ನಾಯಕರು, ಅಧಿಕಾರಿಗಳೂ ಹಾಗೂ ಜನಪ್ರತಿನಿಧಿಗಳೂ ಉಪಸ್ಥಿತರಿದ್ದರು.