ಬೀದರ್ | ನಮ್ಮ ಹಿರಿಯರು ನೀಡಿದ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಬೇಕು : ಶ್ರೀಕಾಂತ್ ವೈರಾಗೆ
ಬೀದರ್ : ಜಾನಪದ ಸಂಸ್ಕೃತಿ ಎಂಬುದು ನಮ್ಮ ಹಿರಿಯರು ನೀಡಿದ್ದು, ಅದನ್ನು ಆಚರಣೆ ಹಾಗೂ ವಿಚಾರಣೆಯಲ್ಲಿ ತರುವ ಮೂಲಕ ಉಳಿಸಿ ಬೆಳೆಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ್ ವೈರಾಗೆ ಅವರು ತಿಳಿಸಿದರು.
ಇಂದು ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಹಾಗೂ ಜಿಲ್ಲಾ ಘಟಕ ಮತ್ತು ಓಂ ಸಿದ್ದಿವಿನಾಯಕ ಪದವಿ ಮಹವಿದ್ಯಾಲಯದ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಜಿಲ್ಲಾ ಪಂಚಾಯತ್ ವತಿಯಿಂದ ಸುಮಾರು 25 ಲಕ್ಷ ರೂ. ವರೆಗೆ ಅನುದಾನ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಅವರು, ಜನಪದ ಸಂಸ್ಕೃತಿ ಉಳಿಸಲು ನಾವು ಕೂಡ ಕೈಜೋಡಿಸುತ್ತೇವೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪ್ರೊ. ಶಂಭುಲಿಂಗ ಕಾಮಣ್ಣ ಅವರು ಮಾತನಾಡಿ, ನೀತಿ ಸಂದೇಶ ಹಾಗೂ ಮಾನವೀಯ ಮೌಲ್ಯಗಳು ಜನಪದ ಸಾಹಿತ್ಯದಲ್ಲಿ ಅಡಗಿವೆ. ಜನಪದ ಸಂಸ್ಕೃತಿ ಪರಿಶುದ್ದವಾಗಿದೆ. ಇಲ್ಲಿ ತೊರಿಕೆ ಇಲ್ಲ. ನುಡಿದಂತೆ ನಡೆಯುವುದು ಜನಪದ ಸಂಸ್ಕೃತಿಯಾಗಿದೆ. ಜನಪದರು ತಾಯಿಗೆ ದೇವರು ಎಂದವರು. ಅಕ್ಷರ ಕಲಿತವ ಭ್ರಷ್ಟರಾಗಬಹುದು ಆದರೆ ಸಂಸ್ಕೃತಿ ಕಲಿತವ ಎಂದು ಭ್ರಷ್ಟರಾಗಲ್ಲ ಎಂದು ಹೇಳಿದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು ನ್ಯೂ ದೆಹಲಿಯ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ್ ಹೆಬ್ಬಾಳೆ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಜಗನ್ನಾಥ್ ಹೆಬ್ಬಾಳೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಿದ್ದಿ ವಿನಾಯಕ ಕಾಲೇಜಿನ ಪ್ರಾಚಾರ್ಯ ಪ್ರೊ.ಸಿದ್ರಾಮ್ ಬಿಚಕುಂದೆ, ಜಾನಪದ ಪರಿಷತ್ತಿನ ಕಾರ್ಯದರ್ಶಿ ಡಾ.ಸುನೀತಾ ಕೂಡ್ಲಿಕರ್, ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಪ್ರೊ.ಸಂಜುಕುಮಾರ್ ತಾಂದಳೆ, ಎಸ್ ಬಿ ಕುಚಬಾಳ್ ಹಾಗೂ ಮಲ್ಲಮ್ಮ ಸಂತಾಜಿ ಸೇರಿದಂತೆ ಅನೇಕರು ಇದ್ದರು.