ಬೀದರ್ | ಸಂವಿಧಾನ ಸರ್ಮಪಣಾ ದಿನದಂದು ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಮನವಿ
ಬೀದರ್ : ಹುಮನಾಬಾದ್ ತಾಲೂಕು ಆಡಳಿತದ ವತಿಯಿಂದ ಆಚರಿಸಲಾದ 76ನೇ ಸಂವಿಧಾನ ಸರ್ಮಪಣಾ ದಿನದಂದು ಉದ್ದೇಶಪೂರ್ವಕವಾಗಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ತಕ್ಷಣವೇ ನೋಟಿಸ್ ಜಾರಿಗೊಳಿಸಿ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ ಮಾಡಿದೆ.
ಹುಮನಾಬಾದ್ ತಹಶೀಲ್ದಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಹುಮನಾಬಾದ್ ತಾಲೂಕು ಆಡಳಿತದ ವತಿಯಿಂದ ನ.26 ರಂದು 76ನೇ ಸಂವಿಧಾನ ಸಮರ್ಪಣಾ ದಿನವನ್ನು ಬಹಳ ವಿಜ್ರಂಭಣೆಯಿಂದ ಆಚಾರಣೆ ಮಾಡಲಾಗಿದೆ. ಆದರೆ ಈ ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ಗೀತಾ ಹೀರೆಮಠ್, ಶಿರಸ್ತೆದಾರ ವಿಜಯಕುಮಾರ ಸ್ವಾಮಿ ಇವರಿಬ್ಬರು ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿ ನಿಷ್ಕಾಳಜಿತನ ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಹುಮನಾಬಾದ್ ತಾಲೂಕಿನಲ್ಲಿ ಸುಮಾರು 36 ರಿಂದ 40 ಜನ ತಾಲೂಕು ಮಟ್ಟದ ಅಧಿಕಾರಿಗಳು ಇದ್ದಾರೆ. ಆದರೆ 76ನೇ ಸಂವಿಧಾನ ಸಮರ್ಪಣಾ ಕಾರ್ಯಕ್ರಮಕ್ಕೆ ಕೇವಲ 3 ರಿಂದ 4 ಜನ ಅಧಿಕಾರಿಗಳು ಮಾತ್ರ ಬಂದಿರುತ್ತಾರೆ. ಆದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸದ ಹಾಗೂ ನಿಷ್ಕಾಳಜಿನತ ತೋರಿಸಿದ ಅಧಿಕಾರಿಗಳಿಗೆ ತಕ್ಷಣ ನೋಟಿಸ್ ಜಾರಿ ಮಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ರಾಹುಲ್ ಉದ್ದಾ, ಕಿಶೋರ್ ಸೂರ್ಯವಂಶಿ, ಶಿವಾನಂದ ಕಟ್ಟಿಮನಿ, ಶಾಬೀರ್ ಶಾ ಹಾಗೂ ಅರುಣ್ ಕಲ್ಲೂರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.