×
Ad

ಬೀದರ್ | ಮಾ.14 ರೊಳಗಾಗಿ ಮೈಕ್ರೋ ಫೈನಾನ್ಸ್‌ಗಳು ಮುಚ್ಚಳಿಕೆ ಪತ್ರ ಸಲ್ಲಿಸಬೇಕು: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Update: 2025-02-20 16:29 IST

ಬೀದರ್ : ಮಾ.14ರ ಒಳಗಾಗಿ ಜಿಲ್ಲೆಯ ಎಲ್ಲಾ ಫೈನಾನ್ಸ್, ಮೈಕ್ರೋ ಫೈನಾನ್ಸ್, ಲೇವಾದೇವಿ ವ್ಯಾಪಾರಸ್ಥರು, ಹಣಕಾಸು ಸಂಸ್ಥೆಗಳು ದಾಖಲಾತಿ ಸಹಿತ ಮುಚ್ಚಳಿಕೆ ಪತ್ರ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಫೈನಾನ್ಸ್‌ಗಳು, ಲೇವಾದೇವಿ ವ್ಯಾಪಾರಸ್ಥರು, ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು, ʼಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ ಬಲವಂತದ ಕ್ರಮಗಳ ಪ್ರತಿಬಂಧನ ಆದೇಶ 2025ʼರ ಅನುಸಾರವಾಗಿ ಕಾರ್ಯವಹಿಸಬೇಕು. ಹಾಗಾಗಿ ಮಾ.14ರ ಒಳಗಡೆ ಎಲ್ಲಾ ದಾಖಲಾತಿಗಳು ಒಳಗೊಂಡ ಲಿಖಿತ ಮುಚ್ಚಳಿಕೆ ಪತ್ರ ಸಲ್ಲಿಸಬೇಕು ಎಂದು ತಿಳಿಸಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಕೆಲ ಪ್ರಕಾರದ ದಾಖಲಾತಿಗಳು ಸಲ್ಲಿಸಬೇಕಾಗುತ್ತದೆ. ಅವುಗಳೆಂದರೆ, ಕಾರ್ಯನಿರ್ವಹಿಸುತ್ತಿರುವ ಅಥವಾ ಕಾರ್ಯನಿರ್ವಹಿಸಲು ಉದ್ದೇಶಿಸಿರುವ ಗ್ರಾಮ ಅಥವಾ ಪಟ್ಟಣದ ವಿಳಾಸ, ಕಾರ್ಯನಿರ್ವಹಿಸುತ್ತಿರುವ ಉದ್ದೇಶ, ವಿಧಿಸಿರುವ ಅಥವಾ ವಿಧಿಸಲು ಉದ್ದೇಶಿಸಿರುವ ಬಡ್ಡಿಯ ದರ, ಯುಕ್ತ ಜಾಗರೂಕ ನಿರ್ವಹಣಾ ವ್ಯವಸ್ಥೆ ಮತ್ತು ವಸೂಲಾತಿ ಜಾರಿಗೊಳಿಸುವ ವ್ಯವಸ್ಥೆ, ಸಾಲ ನೀಡಿಕೆ ಅಥವಾ ನೀಡಲಾದ ಹಣದ ವಿವರ, ಸಾಲ ವಸೂಲಿ ನಿರ್ವಹಿಸಲು ಅಧಿಕೃತಗೊಳಿಸಲಾದ ವ್ಯಕ್ತಿಗಳ ಪಟ್ಟಿ, ಸಾಲಗಾರರ ಹೆಸರು ಮತ್ತು ವಿಳಾಸ, ಸಾಲಗಾರನಿಗೆ ನೀಡಲಾದ ಒಟ್ಟು ಅಸಲು ಮೊತ್ತ, ಸಾಲಗಾರನಿಂದ ಈಗಾಗಲೇ ವಸೂಲು ಮಾಡಲಾದ ಮೊತ್ತ, ಸಾಲಗಾರನಿಂದ ಇನ್ನೂ ವಸೂಲು ಮಾಡಬೇಕಾದ ಬಾಕಿ ಮೊತ್ತ ಆ ದಾಖಲೆಗಳಲ್ಲಿ ಸೇರಿವೆ. ಈ ಉಪಬಂಧಗಳಿಗೆ ಅನುಸಾರವಾಗಿ ಕಾರ್ಯವಹಿಸಲಾಗುವುದು ಎಂದು ಲಿಖಿತ ಮುಚ್ಚಳಿಕೆ ಪತ್ರ ನೀಡಬೇಕು ಎಂದು ಅವರು ಮಾಹಿತಿ ನೀಡಿದರು.

ತಮ್ಮ ಮುಚ್ಚಳಿಕೆ ಪತ್ರ ನೀಡಿ, ನೋಂದಣಿ ಪ್ರಾಧಿಕಾರದ ಆದೇಶದ ಮೇರೆಗೆ ನೋಂದಣಿ ಪಡೆಯದೇ ಯಾವುದೇ ಸಾಲ ಮಂಜೂರು ಮಾಡತಕ್ಕದ್ದಲ್ಲ ಅಥವಾ ಯಾವುದೇ ಸಾಲ ವಸೂಲು ಮಾಡತಕ್ಕದ್ದಲ್ಲ ಎಂದು ಅವರು ಹೇಳಿದ್ದಾರೆ.

ಮುಚ್ಚಳಿಕೆ ಪತ್ರವನ್ನು ನೋಂದಣಿ ಪ್ರಾಧಿಕಾರ, ಚುನಾವಣಾ ಶಾಖೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರ್, ನಗರಾಭಿವೃದ್ಧಿ ಕೋಶದ ಮೋತಿಲಾಲ್ ಲಮಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News