×
Ad

ಬೀದರ್ ಜಿಲ್ಲೆಯಲ್ಲಿ ರಾಜ್ಯಮಟ್ಟದ ಜಾನಪದ ಜಾತ್ರೆ ಆಯೋಜನೆಗೆ ತೀರ್ಮಾನ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Update: 2025-03-11 18:30 IST

ಬೀದರ್ : ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕದ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಜಾನಪದ ಜಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.

ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಗ್ರಾಮೀಣ ಜಾನಪದ ಕಲೆ, ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ಜಾನಪದ ಜಾತ್ರೆಯನ್ನು ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು. ಸ್ಥಳೀಯ ಹಾಗೂ ಹೊರ ಜಿಲ್ಲೆಯ ಕಲಾವಿದರು ಈ ಜಾನಪದ ಜಾತ್ರೆಯಲ್ಲಿ ಪಾಲ್ಗೊಂಡು ವಿವಿಧ ಸಾಂಸ್ಕೃತಿಕ ರಸದೌತಣ ಉಣಬಡಿಸಲಿದ್ದಾರೆ ಎಂದು ಹೇಳಿದರು.

ಜಾತ್ರೆಯ ಒಂದು ದಿನದ ಮೊದಲು ಕಾರ್ಯಕ್ರಮದ ಜಾಗೃತಿಗಾಗಿ ಸಾವಿರಾರು ವಿದ್ಯಾರ್ಥಿ, ಸಂಘ ಸಂಸ್ಥೆಗಳಿಂದ ವಾಕ್ ಥಾನ್ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು ಅವರು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ನಗರದ ಮುಖ್ಯ ವೃತ್ತಗಳಲ್ಲಿ ಪ್ರಚಾರ ಹಮ್ಮಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ವಿವಿಧ ಸಮಿತಿ ಹಾಗೂ ಉಪ ಸಮಿತಿಗಳು ರಚಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಇದರ ಬಗ್ಗೆ ಇನ್ನೊಂದು ಸಭೆ ನಡೆಸಲಾಗುವುದು. ಜಾತ್ರೆಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ಕಲಾ ಪರಿಕರಗಳಾದ ಕಾಸ್ಟ ಕಲಾಕೃತಿ, ಬಿದರಿ ಕಲೆ, ಲಂಬಾಣಿ ಉಡುಪು, ಚಿತ್ರಸಂತೆ, ಪುಸ್ತಕ ಮಳಿಗೆ ಮುಂತಾದವುಗಳು ಸಹ ಹಮ್ಮಿಕೊಳ್ಳಲಾಗುವುದು. ವಿವಿಧ ಇಲಾಖೆಗಳಿಂದ ಮಳಿಗೆಗಳನ್ನು ಹಾಕುವಂತೆ ಅವರು ಸೂಚನೆ ನೀಡಿದರು.

ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ್ ಹೂಗಾರ್ ಅವರು ಮಾತನಾಡಿ, ಬೇರೆ ಜಿಲ್ಲೆಗಳಿಂದ ಬರುವ ಕಲಾವಿದರಿಗೆ ಸೂಕ್ತ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು. ನಿಯಮಾನುಸಾರ ಸಂಭಾವನೆ ಹಾಗೂ ಪ್ರಯಾಣದ ವೆಚ್ಚ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಜಾನಪದ ಜಾತ್ರೆಯಲ್ಲಿ ಬೆಳಿಗ್ಗೆ ನಗರದಾದ್ಯಂತ ಸಾವಿರಾರು ಕಲಾವಿದರಿಂದ ಮೆರವಣಿಗೆ ಜರುಗಲಿದ್ದು, ಕವಿಗೋಷ್ಠಿ, ಸಂಗೀತ ಕಾರ್ಯಕ್ರಮ, ನಾಟಕ, ನೃತ್ಯ ಹಾಗೂ ವಿವಿಧ ರೀತಿಯ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಸಕ ಸಿದ್ರಾಮ್ ಶಿಂಧೆ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ, ಪ್ರೊ.ಜಗನ್ನಾಥ್ ಹೆಬ್ಬಾಳೆ, ಎಂ.ಎಸ್.ಮನೋಹರ್ ಭಾರತಿ ವಸ್ತ್ರದ್, ಪಾರ್ವತಿ ಸೋನಾರೆ, ದಿಲೀಪ್ ಕಾಡಲಾದ್ ಹಾಗೂ ದೇವಿದಾಸ್ ಚಿಮಕೋಡ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News