ಡಾ.ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆಗೆ ಪಾದಯಾತ್ರೆ ಮೂಲಕ ಹುಮನಾಬಾದ್ ನಿಂದ ಭಾಲ್ಕಿಗೆ ಹೊರಟ ಅಭಿಮಾನಿ
ಹುಮನಾಬಾದ್ : ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ಅವರು ಶುಕ್ರವಾರ ರಾತ್ರಿ ನಿಧನ ಹೊಂದಿದ್ದು, ಭಾಲ್ಕಿಯ ಶಾಂತಿಧಾಮದಲ್ಲಿ ಶನಿವಾರ ನಡೆಯಲಿರುವ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹುಮನಾಬಾದ್‌ನ ಖಂಡ್ರೆ ಪರಿವಾರದ ಅಭಿಮಾನಿ ಹಾಗೂ ದಲಿತ ಮುಖಂಡ ಲಕ್ಷ್ಮಿಪುತ್ರ ಮಾಳಗೆ ಅವರು ಪಾದಯಾತ್ರೆ ಕೈಗೊಂಡಿದ್ದಾರೆ.
ಪಾದಯಾತ್ರೆ ಆರಂಭಿಸುವ ಮುನ್ನ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ನಾಯಕರ ಆಶೀರ್ವಾದ ಪಡೆದು ಭಾಲ್ಕಿಯತ್ತ ಪ್ರಯಾಣ ಬೆಳೆಸಿದರು.
ಹುಮನಾಬಾದ್‌ನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಭಾಲ್ಕಿ ನಗರಕ್ಕೆ ಜಲಸಂಗಿ, ದುಬಲಗುಂಡಿ ಹಾಗೂ ಏಣಕೂರ್ ಮಾರ್ಗವಾಗಿ ಲಕ್ಷ್ಮಿಪುತ್ರ ಮಾಳಗೆ ಅವರು ಪಾದಯಾತ್ರೆ ನಡೆಸಲಿದ್ದಾರೆ. ಜಿಲ್ಲೆಯ ಮಹಾನ್ ಚೇತನಕ್ಕೆ ಈ ಮೂಲಕ ವಿಶಿಷ್ಟವಾಗಿ ಗೌರವ ಸಲ್ಲಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಿಪುತ್ರ ಮಾಳಗೆ, ಲೋಕನಾಯಕ ಭೀಮಣ್ಣ ಖಂಡ್ರೆ ಅವರನ್ನು ಕಳೆದುಕೊಂಡಿರುವುದು ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಸರ್ವಧರ್ಮಗಳನ್ನು ಸಮಾನವಾಗಿ ಕಾಣುತ್ತಿದ್ದ ಇಂತಹ ಧೀಮಂತ ನಾಯಕರು ಸಿಗುವುದು ಅಪರೂಪ. ಅವರ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಅವರ ಮೇಲಿರುವ ಅಭಿಮಾನ ಹಾಗೂ ಗೌರವದ ಸಂಕೇತವಾಗಿ ನಾನು ಪಾದಯಾತ್ರೆ ಮೂಲಕ ತೆರಳಿ ಅಂತಿಮ ದರ್ಶನ ಪಡೆಯಲಿದ್ದೇನೆ,ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ್ ಪಾಟೀಲ್ ಉಪಸ್ಥಿತರಿದ್ದರು.