×
Ad

ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸಕಾಲದಲ್ಲಿ ವಿತರಣೆ ಮಾಡಿ : ಸಚಿವ ರಹೀಮ್ ಖಾನ್

Update: 2025-05-27 18:18 IST

ಬೀದರ್ : ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸಕಾಲದಲ್ಲಿ ವಿತರಣೆ ಮಾಡಬೇಕು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯವರ ಸಂಯುಕ್ತಾಶ್ರಯದಲ್ಲಿ ಚಾಂಬೋಳಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ʼಬಿತ್ತನೆ ಬೀಜ ವಿತರಣೆ ಹಾಗೂ ಬೀಜ ಉಪಚಾರ ಹಾಗೂ ಕೀಟನಾಶಕ ಸುರಕ್ಷಾ ತರಬೇತಿʼ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿತ್ತನೆ ಬೀಜ, ಕೃಷಿಭಾಗ್ಯ ಯೋಜನೆ, ಸಾವಯವ ಕೃಷಿ ಹಾಗೂ ಇತರೆ ಸರ್ಕಾರದ ಯೋಜನೆಗಳ ಸಹಾಯಧನದಲ್ಲಿ ರೈತರಿಗೆ ಲಾಭವಾಗುವಂತೆ ತಲುಪಿಸಬೇಕು. ಬೀಜ, ಗೊಬ್ಬರ ಕೊರತೆಯಾಗದಂತೆ ಸಕಾಲದಲ್ಲಿ ವಿತರಣೆ ಮಾಡಬೇಕು ಎಂದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ಅವರು ಮಾತನಾಡಿ, ಸೋಯಾ ಮತ್ತು ಇತರೆ ಬೀಜಗಳು ದಾಸ್ತಾನು ಮಾಡಿರುವ 29 ಬೀಜ ವಿತರಣಾ ಕೇಂದ್ರಗಳ ಬಗ್ಗೆ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಾಹಿತಿ ನೀಡಿ ದಿನಾಂಕವಾರು ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸಕಾಲದಲ್ಲಿ ಮಳೆಯಾಗಿರುವುದರಿಂದ ಉದ್ದು, ಹೆಸರು ಮತ್ತು ಮಿಶ್ರ ಬೆಳೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಗೂ ಡಿಎಪಿ ಬದಲಿಗೆ ಸಂಯುಕ್ತ ಗೊಬ್ಬರ ಬಳಸಲು ರೈತರಿಗೆ ಸಲಹೆ ನೀಡಿದರು.

ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಡಾ. ಮಲ್ಲಿಕಾರ್ಜುನ್ ಲಿಂಗದಳ್ಳಿ ಅವರು ಸಮಗ್ರ ಕೃಷಿ ಪದ್ಧತಿ ಹಾಗೂ ಬಿತ್ತನೆ ಬೀಜ ಉಪಚಾರದ ಕುರಿತು ರೈತರಿಗೆ ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಆರ್.ಎಲ್. ಜಾಧವ್, ಚಾಂಬೋಳ್ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಖಾ ಅರ್ಜುನ್ ಕೋಳಿ, ಉಪಾಧ್ಯಕ್ಷ ದೌಲತರಾವ್, ಚಾಂಬೋಳ್ ಪಿಕೆಪಿಎಸ್ ಅಧ್ಯಕ್ಷ ಸುನಿಲ್ ಪಾಟೀಲ್, ಜಿಲ್ಲಾ ಕೃಷಿಕ ಸಮಾಜದ ಸದಸ್ಯ ಸಂಜು ಪಾಟೀಲ್ ಕನ್ನಳ್ಳಿ, ತಾಲ್ಲೂಕ ಪಂಚಾಯತಿ ಸದಸ್ಯ ರಾಮರಾವ್ ಪಾಟೀಲ್, ನಾಗೇಂದ್ರ ಪಾಟೀಲ್, ಬಂಡೆಪ್ಪಾ ಜ್ಯಾಂತೆ, ಧನರಾಜ್ ಪಾಟೀಲ್, ಉಮೇಶ್ ಮೊಟ್ಟೆ ಹಾಗೂ ಚಂದ್ರಕಾಂತ್ ಹಿಪ್ಪಳಗಾಂವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News