×
Ad

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ : ಸಚಿವ ಈಶ್ವರ್ ಖಂಡ್ರೆ

Update: 2025-08-01 20:48 IST

ಬೀದರ್: ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಬಿ. ಖಂಡ್ರೆ ಅವರು ತಿಳಿಸಿದರು.

ಇಂದು ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಶ್ರೀ ವಿಜಯ್ ಮಹಾಂತ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯನ್ನು ರಾಜ್ಯ ಸರ್ಕಾರದಿಂದ ವ್ಯಸನ ಮುಕ್ತ ದಿನಾಚರಣೆ ಎಂದು ಆಚಾರಿಸಲಾಗುತ್ತಿದೆ. ಮಹಾಂತ ಶಿವಯೋಗಿಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಆ.1, 1930ರಲ್ಲಿ ಜನಿಸಿದರು. 1970ರಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ದೃಡ ಸಂಕಲ್ಪ ತೊಟ್ಟು 1974ರಲ್ಲಿ 'ಮಾಹಾಂತ ಜೋಳಿಗೆ, ದುಷ್ಚಟಗಳ ಭಿಕ್ಷೆ' ಎಂಬ ವಾಕ್ಯದೊಂದಿಗೆ ಆಂದೋಲನ ಆರಂಭಿಸಿದರು. ಅವರ ಆಂದೋಲನ ಪರಿಣಾಮವಾಗಿ ಅನೇಕರು ವ್ಯಸನಗಳಿಂದ ಆಚೆ ಬಂದು ಉತ್ತಮ ಜೀವನ ಕಟ್ಟಿಕೊಂಡರು ಎಂದು ತಿಳಿಸಿದರು.

ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಒಳಪಡುತ್ತಿದ್ದಾರೆ. ಆದ್ದರಿಂದ ಅವರು ದುಶ್ಚಟಗಳಿಗೆ ಬಲಿಯಾಗದಂತೆ ಅವರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ. ಯುವಕರು ಧೂಮಪಾನ, ಮದ್ಯಪಾನ ಬಿಟ್ಟು ಆರೋಗ್ಯವಂತ ಜೀವನ ಕಟ್ಟಿಕೊಳ್ಳಬೇಕು. ಮೋಬೈಲ್‍ ಮತ್ತು ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದು ಶಿಕ್ಷಣ, ಕ್ರೀಡೆ, ಯೋಗಾಸನದಂತಹ ಉತ್ತಮ ಹವ್ಯಾಸ ಬೆಳೆಸಿಕೊಂಡು ದೇಶದ ಹಾಗೂ ಸಮಾಜದ ಒಳಿತಿಗಾಗಿ ತಮ್ಮದೆಯಾದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಮನೋವೈದ್ಯ ತಜ್ಞ ಡಾ. ರಾಘವೇಂದ್ರ ವಾಗೋಲ್ ಅವರು ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ನಮ್ಮ ಮೆದುಳು ಹಾಗೂ ನರಮಂಡಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳು ಅಥವಾ ಮಾದಕ ದ್ರವ್ಯಗಳೆಂದರೆ ತಂಬಾಕು ಉತ್ಪನ್ನ, ಆಲ್ಕೊಹಾಲ್‍, ಗಾಂಜಾ, ಹೆರಾಯಿನ್, ಕೊಕೇನ್, ಎಂಡಿಎಂಎ ಮುಂತಾದವು ಆಗಿವೆ. ಕಾಲೇಜು ದಿನಗಳಲ್ಲಿ ಕುತೂಹಲಕ್ಕೆ ಸ್ನೇಹಿತರ ಪ್ರಚೋದನೆಯಿಂದ ಮಾದಕ ವಸ್ತುಗಳ ಬಳಕೆ ಪ್ರಾರಂಭವಾಗುತ್ತದೆ. ನಂತರ ಇದು ನಿಯಮಿತ ಬಳಕೆ ಪ್ರಾರಂಭವಾಗುತ್ತದೆ. ತದನಂತರ ಇದರ ದುರುಪಯೋಗ ಪ್ರಾರಂಭವಾಗಿ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ನಂತರ ಇದಕ್ಕೆ ದಾಸರಾಗಿ ವ್ಯಸನಕ್ಕೆ ಒಳಗಾಗುತ್ತಾರೆ ಎಂದು ತಿಳಿಸಿದರು.

ವ್ಯಸನಕ್ಕೆ ಒಳಗಾದ ಹಂತದಿಂದ ಹೊರಕ್ಕೆ ಬರುವುದು ಹೆಚ್ಚು ಕಷ್ಟವಾಗುತ್ತದೆ. ಹೆಚ್ಚು ಬಳಕೆಯಿಂದಾಗಿ ಕ್ಯಾನ್ಸರ್ ಮತ್ತು ಇತರೆ ರೋಗಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅದರಿಂದ ಇಂತಹ ದುಶ್ಚಟಗಳಿಂದ ದೂರವಿರಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸುಳ್ಳೊಳ್ಳಿ , ವಿಜಯ ಮಹಾಂತ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾಚಪ್ಪ ಮಾಶೆಟ್ಟಿ, ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಮಹೇಶ್ ಮಾಶೆಟ್ಟಿ, ಪ್ರಶಾಂತ್ ಮಾಶೆಟ್ಟಿ , ಪದವಿ ಕಾಲೇಜಿನ ಪ್ರಾಂಶುಪಾಲೆ ಸ್ವಪ್ನಾ ಮಾಶಟ್ಟಿ, ನಿವೃತ್ತ ಪ್ರಾಂಶುಪಾಲ ಹಾಗೂ ಕಸಾಪ ಕೋಶಾಧ್ಯಕ್ಷ ಶಿವಶಂಕರ್ ಟೋಕರೆ, ಮೊರಾರ್ಜಿ ಕಾಲೇಜಿನ ಪ್ರಾಂಶುಪಾಲ ಚನ್ನಬಸವ ಹೆಡೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಜಯಕೃಷ್ಣ ಸೋಲಪೂರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




 


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News