ತಳಮಟ್ಟದಿಂದ ಪಕ್ಷ ಬಲಪಡಿಸುವಲ್ಲಿ ಯುವ ಕಾಂಗ್ರೆಸ್ ಪಾತ್ರ ಅಪಾರ : ಮಾಜಿ ಸಚಿವ ರಾಜಶೇಖರ್ ಪಾಟೀಲ್
ಹುಮನಾಬಾದ್ : ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠಗೊಳಿಸುವಲ್ಲಿ ಯುವ ಕಾಂಗ್ರೆಸ್‌ನ ಪಾತ್ರ ಮತ್ತು ಶ್ರಮ ಅಪಾರವಾಗಿದೆ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಹೇಳಿದರು.
ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ರವಿವಾರ ಆಯೋಜಿಸಿದ್ದ ಯುವ ಕಾಂಗ್ರೆಸ್ ಸಂಘಟನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಸೇವಾ ಮನೋಭಾವ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಯುವ ಕಾಂಗ್ರೆಸ್ ಸಂಘಟನೆಯನ್ನು ಸ್ಥಾಪಿಸಿದರು ಎಂದು ಅವರು ಸ್ಮರಿಸಿದರು.
ಬೂತ್ ಮಟ್ಟದಲ್ಲಿ ಯುವ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಪಕ್ಷವನ್ನು ಗಟ್ಟಿಗೊಳಿಸುವುದು, ಯುವಕರಿಗೆ ರಾಜಕೀಯ ವೇದಿಕೆ ಕಲ್ಪಿಸುವುದು ಮತ್ತು ಭವಿಷ್ಯದ ಸಮರ್ಥ ನಾಯಕರನ್ನು ತಯಾರು ಮಾಡುವುದು ಯುವ ಕಾಂಗ್ರೆಸ್‌ನ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಯುವ ಸಂಘಟನೆಯು ಸಾರ್ವಜನಿಕ ಸಮಸ್ಯೆಗಳು, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ನಿರಂತರವಾಗಿ ಧ್ವನಿ ಎತ್ತಲಿದೆ. ಚುನಾವಣಾ ಸಂದರ್ಭಗಳಲ್ಲಿ ಹಾಗೂ ಸಂಕಷ್ಟದ ಕಾಲದಲ್ಲಿ ಪಕ್ಷದ ಗೆಲುವಿಗೆ ಯುವ ಶಕ್ತಿಯೇ ಪ್ರಮುಖ ಆಧಾರವಾಗಿರುತ್ತದೆ. ಆದ್ದರಿಂದ, ಯುವ ಕಾರ್ಯಕರ್ತರು ಇನ್ನಷ್ಟು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ್, ಕೆಎಂಎಫ್ ನಿರ್ದೇಶಕ ರೇವಣಸಿದ್ದಪ್ಪ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರ್ ಮಿಯಾ, ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಜಮಗಿ, ದತ್ತಕುಮಾರ್ ಚಿದ್ರಿ, ಮಲ್ಲಿಕಾರ್ಜುನ್ ಮಾಳಶೆಟ್ಟಿ, ಶ್ರೀನಾಥ್ ದೇವಣಿ, ಮಹೇಶ್ ಅಗಡಿ, ಸುರೇಶ್ ಘಾಂಗ್ರೆ, ವೀರಪ್ಪ ಭೂತಾಳೆ, ದತ್ತು ಲದ್ದಿ, ಶಿವಾನಂದ್ ಕಟ್ಟಿಮನಿ, ಯಾಸೀರ್ ಅಫ್ಸರಮಿಯಾ, ರಾಹುಲ್ ಉದ್ದಾ, ಶಿವಕುಮಾರ್ ಸಿಂಧೆ, ಜೀವನ್ ಪೊಲೆ,ಳ್ ಹಾಗೂ ವಿಜಯ್ ಪವಾರ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.