×
Ad

ಬೀದರ್: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸದುಪಯೋಗ ಪಡೆಯಲು ಮನವಿ

Update: 2025-06-14 00:03 IST

ಜಿಯಾ ಉಲ್ ಹಕ್

ಬೀದರ್: ರೈತರು ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಿಯಾ ಉಲ್ ಹಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2025-26 ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ. ಇದು ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಲ್ಲಿ ಭಾಗವಹಿಸಿ ಲಾಭ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಪಾಲ್ಗೊಳ್ಳಲು ಜುಲೈ 31 ಹಾಗೂ ಮಳೆ ಆಶ್ರಿತ ಬೆಳೆಗೆ (ಉ:ಸೂರ್ಯಕಾಂತಿ) ಆಗಸ್ಟ್ 16 ಕೊನೆಯ ದಿನಾಂಕ ಆಗಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ಮಳೆ ಆಶ್ರಿತ ಬೆಳೆಗಳಾದ ತೊಗರಿ, ಹಾಗೂ ಸೋಯಾ, ಅವರೆ ಬೆಳೆ ಮತ್ತು ಇತರೆ ಬೆಳೆಗಳಾದ ಹೆಸರು, ಸೂರ್ಯಕಾಂತಿ, ಉದ್ದು, ಮುಸುಕಿನ ಜೋಳ, ಶೇಂಗಾ, ಜೋಳ, ಎಳ್ಳು , ಸಜ್ಜೆ , ಸೋಯಾ, ಅವರೆ ಮತ್ತು ನೀರಾವರಿ ಆಶ್ರಿತ ಬೆಳೆಗಳಾದ ಭತ್ತ ಹಾಗೆಯೇ ನೀರಾವರಿ ಮತ್ತು ಮಳೆ ಆಶ್ರಿತ ಬೆಳೆಯಾದ ಹತ್ತಿ ಬೆಳೆಗಳನ್ನು ವಿವಿಧ ತಾಲ್ಲೂಕಿಗೆ ನಿಗದಿಪಡಿಸಿ, ಹೋಬಳಿ ಮಟ್ಟಕ್ಕೆ ಅನುಷ್ಠಾನಗೊಳಿಸಲು ಯೂನಿವರ್ಸಲ್ ಸೋಂಪೊ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆಯನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೆಳೆಸಾಲ ಪಡೆದ ರೈತರಿಗಾಗಿ ಆಪ್ಟಿಂಗ್ ಔಟ ಮತ್ತು ಆಪ್ಟಿಂಗ್ ಇನ್ ಎಂಬ ಅವಕಾಶವನ್ನು ರೈತರಿಗೆ ನೀಡಲಾಗಿದೆ. ಇದರಲ್ಲಿ ಬೆಳೆಸಾಲ ಪಡೆದ ರೈತರು ಬೆಳೆವಿಮೆ ಮಾಡಿಸುವುದು ಕಡ್ಡಾಯವಾಗಿರುವುದಿಲ್ಲ. ಬೆಳೆವಿಮೆ ಮಾಡಲು ಇಚ್ಛಿಸದ, ಸಾಲ ಪಡೆದಂತಹ ರೈತರು ಬೆಳೆವಿಮೆ ಮಾಡಿಸಲು ನಿಗಧಿಪಡಿಸಿರುವ ಅಂತಿಮ ದಿನಾಂಕಕ್ಕಿಂತ 7 ದಿನದ ಮುಂಚಿತವಾಗಿ ಸಂಬಂಧಪಟ್ಟ ಬ್ಯಾಂಕಿಗೆ ಆಪ್ಟಿಂಗ್ ಔಟ ಎಂಬ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ನೀಡಿದ ರೈತರನ್ನು ವಿಮೆ ಯೋಜನೆಯಿಂದ ಬ್ಯಾಂಕಿನವರು ಹೊರಗಿಡಬೇಕಾಗುತ್ತದೆ. ಸಾಲ ಪಡೆದಿರುವ ರೈತರ ಪೈಕಿ ಆಪ್ಟಿಂಗ್ ಔಟ ನಮೂನೆ ನೀಡದ ಉಳಿದ ಎಲ್ಲಾ ರೈತರನ್ನು ವಿಮಾ ಯೋಜನೆಯಡಿ ತರುವುದು ಕಡ್ಡಾಯವಾಗಿರುತ್ತದೆ.

ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ ಸಂಖ್ಯೆ ಜೊಡಿಸಿದ ಬ್ಯಾಂಕ್ ಖಾತೆ ವಿವರ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಸಂಬಂಧಿಸಿದ ಬ್ಯಾಂಕ್ ಅಥವಾ ಸಿ.ಎಸ್.ಸಿ ಕೇಂದ್ರಗಳಿಗೆ ಒದಗಿಸಿ ನೋಂದಣಿ ಮಾಡಿಸಬಹುದು. ರೈತರು ನೋಂದಣಿಗಾಗಿ ಕಡ್ಡಾಯವಾಗಿ FRUITS ID (FID) ಹೊಂದಿರಬೇಕಾಗಿದೆ.

ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ, ಗ್ರಾಮೀಣ, ಸಹಕಾರಿ ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರ ಅಥವಾ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಇಲ್ಲವೇ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News