ಹುಮನಾಬಾದ್ | ಬಿಎಲ್‌ಒಗಳಿಗೆ ಸಾರ್ವಜನಿಕರು ಸಹಕರಿಸಿ : ಶಾಸಕ ಸಿದ್ಧು ಪಾಟೀಲ್
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಯಶಸ್ವಿಗೆ ಕರೆ
ಹುಮನಾಬಾದ್: ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಶಾಸಕ ಸಿದ್ಧು ಪಾಟೀಲ್ ಮನವಿ ಮಾಡಿದರು.
ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಧೂಮ್ಮನಸೂರ್ ಗ್ರಾಮದಲ್ಲಿ ಚುನಾವಣಾ ಆಯೋಗದಿಂದ ನಿಯೋಜಿಸಲಾದ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಭೇಟಿ ಮಾಡಿ, ಸಾರ್ವಜನಿಕರಿಗೆ ಎನ್ಯೂಮರೇಷನ್ ಫಾರ್ಮ್ ವಿತರಿಸಿದ ಬಳಿಕ ಅವರು ಮಾತನಾಡಿದರು.
“ನಿಮ್ಮ ಮತ, ನಿಮ್ಮ ಹಕ್ಕು ಹಾಗೂ ನಿಮ್ಮ ಜವಾಬ್ದಾರಿ” ಎಂಬ ಆಶಯದೊಂದಿಗೆ ಮನೆ ಬಾಗಿಲಿಗೆ ಆಗಮಿಸುವ ಬಿಎಲ್‌ಒಗಳಿಗೆ ಅಗತ್ಯ ದಾಖಲೆಗಳೊಂದಿಗೆ ನಿಖರ ಮಾಹಿತಿ ನೀಡಿ ಸಂಪೂರ್ಣ ಸಹಕಾರ ನೀಡಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಪ್ರತಿಯೊಬ್ಬರ ಮತವೂ ಅಮೂಲ್ಯವಾಗಿದ್ದು, ನಿಖರವಾದ ಮತದಾರರ ಪಟ್ಟಿಯೇ ಸುಭದ್ರ ಪ್ರಜಾಪ್ರಭುತ್ವದ ಬುನಾದಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಮತದಾರರ ಪಟ್ಟಿಯ ನಿಖರತೆಯೇ ಪ್ರಜಾಪ್ರಭುತ್ವದ ಶಕ್ತಿಯಾಗಿದ್ದು, ಸಾರ್ವಜನಿಕರು ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಪರಿಷ್ಕರಣೆಗಾಗಿ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿ ದೇಶದ ಉಜ್ವಲ ಭವಿಷ್ಯಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಸಾರ್ವಜನಿಕರು ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.