ಹುಮನಾಬಾದ್ | ಬ್ರೇಕ್ ವಿಫಲಗೊಂಡ ರಾಶಿ ಯಂತ್ರ ಆಟೋಗೆ ಢಿಕ್ಕಿ : ತಪ್ಪಿದ ಭಾರಿ ಅನಾಹುತ
Update: 2026-01-01 20:46 IST
ಹುಮನಾಬಾದ್ : ತಾಲೂಕಿನ ಚಿಟಗುಪ್ಪ ಪಟ್ಟಣದಲ್ಲಿ ರಾಶಿ ಮಾಡುವ ದೊಡ್ಡ ಯಂತ್ರವೊಂದು ಬ್ರೇಕ್ ವಿಫಲಗೊಂಡ ಪರಿಣಾಮ ಡಿವೈಡರ್‌ಗೆ ಗುದ್ದಿ, ನಂತರ ರಸ್ತೆ ಪಕ್ಕದಲ್ಲಿ ನಿಂತಿದ್ದ ಆಟೋಗೆ ಢಿಕ್ಕಿ ಹೊಡೆದ ಘಟನೆ ಗುರುವಾರ ನಡೆದಿದ್ದು, ಭಾರಿ ಅನಾಹುತವೊಂದು ತಪ್ಪಿದೆ.
ಗುರುವಾರ ರಾಶಿ ಮಾಡುವ ಯಂತ್ರವು ನಿಯಂತ್ರಣ ತಪ್ಪಿ ಮೊದಲು ರಸ್ತೆಯ ಮಧ್ಯದ ಡಿವೈಡರ್‌ಗೆ ಗುದ್ದಿದ್ದು, ಬಳಿಕ ರಸ್ತೆ ಬದಿಯಲ್ಲಿ ನಿಂತಿದ್ದ ಆಟೋಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಸಂಪೂರ್ಣವಾಗಿ ನುಚ್ಚುನೂರಾಗಿದ್ದು, ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಅಪಘಾತದಲ್ಲಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ಸ್ಥಳವು ಚಿಟಗುಪ್ಪ ಪಟ್ಟಣದ ಪ್ರಮುಖ ರಸ್ತೆ ಆಗಿದ್ದು, ಸದಾ ಜನಸಂದಣಿಯಿಂದ ಕೂಡಿರುತ್ತದೆ. ಆದರೆ ಘಟನೆ ವೇಳೆ ರಸ್ತೆ ಮೇಲೆ ಜನರು ಇರದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.