ಕಲ್ಯಾಣ ಕರ್ನಾಟಕದಲ್ಲಿಯೇ ಭಾಲ್ಕಿಯನ್ನು ಮಾದರಿ ಪಟ್ಟಣವನ್ನಾಗಿ ಮಾಡುವುದು ನಮ್ಮ ಗುರಿ : ಸಚಿವ ಈಶ್ವರ್ ಖಂಡ್ರೆ
10 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ
ಭಾಲ್ಕಿ: ತಾಲೂಕು ಸೇರಿದಂತೆ ಭಾಲ್ಕಿ ಪಟ್ಟಣವನ್ನು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ಮಾದರಿ ನಗರವನ್ನಾಗಿ ರೂಪಿಸುವ ಗುರಿ ನಮ್ಮದಾಗಿದೆ ಎಂದು ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು.
ಪಟ್ಟಣದ ಗುರು ಕಾಲೋನಿಯ ಮಹಾದೇವ ಮಂದಿರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಭಾಲ್ಕಿ ಪಟ್ಟಣದ 10 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗುರು ಕಾಲೋನಿಯ ಮಹಾದೇವ ಮಂದಿರದ ತೋಟದ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ 10 ಲಕ್ಷ ರೂ. ಹಾಗೂ ಪಕ್ಕದ ರಸ್ತೆಗಳ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಲೆಕ್ಚರರ್ ಕಾಲೋನಿ, ಗುರು ಕಾಲೋನಿಗಳು ಜಿಲ್ಲೆಯಲ್ಲಿಯೇ ಮಾದರಿ ಕಾಲೋನಿಗಳಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, 2024-25ನೇ ಸಾಲಿನ ವಿಶೇಷ ಯೋಜನೆಯ ಅಡಿಯಲ್ಲಿ 1.45 ಕೋಟಿ ರೂ. ವೆಚ್ಚದಲ್ಲಿ ವಾರ್ಡ್ ಸಂಖ್ಯೆ 1 ರಿಂದ 9 ರಲ್ಲಿ ಕಾಂಕ್ರಿಟ್ ಚರಂಡಿ, ರಸ್ತೆ ನಿರ್ಮಾಣ, 2 ಕೋಟಿ ರೂ. ವೆಚ್ಚದಲ್ಲಿ ವಾರ್ಡ್ ಸಂಖ್ಯೆ 10,11,12,13 ಮತ್ತು 14 ರಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ವಾರ್ಡ್ ಸಂಖ್ಯೆ 15,16,17 ಮತ್ತು 18 ರಲ್ಲಿ 40 ಲಕ್ಷ ರೂ. ಸಿಸಿ ರಸ್ತೆ, ಚರಂಡಿ ನಿರ್ಮಾಣ ಮತ್ತು ವಾರ್ಡ್ ಸಂಖ್ಯೆ 19,20 ಮತ್ತು 21 ರಲ್ಲಿ 1.30 ಕೊಟಿ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅರಣ್ಯ ನಿಗಮದ ಉಪಾಧ್ಯಕ್ಷ ಹಣಮಂತರಾವ್ ಚೌವ್ಹಾಣ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ್ ಕಾರಬಾರಿ, ಪುರಸಭೆ ಅಧ್ಯಕ್ಷೆ ಶಶಿಕಲಾ ಸಿಂಧನಕೆರೆ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ್ ವಂಕೆ, ರಾಹುಲ್ ಪೂಜಾರಿ, ಸಹಾಯಕ ಆಯುಕ್ತ ಪ್ರಕಾಶ್ ಕುದರಿ, ಓಣಿಯ ಪ್ರಮುಖರಾದ ನ್ಯಾಯವಾದಿ ಉಮಾಕಾಂತ್ ವಾರದ್, ರಮೇಶ್ ಗೊನ್ನಾಳೆ, ಬಾಲರಾಜ್ ಕುಂಬಾರ್, ಬಸವರಾಜ್ ಕುರುಬಖೇಳಗೆ, ಅಶೋಕ್ ಬಾವುಗೆ, ಮಂಗಲಾ ಟೀಚರ್, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ್ ರಾಜಭವನ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಅಧ್ಯಕ್ಷ ಜಯರಾಜ್ ದಾಬಶೆಟ್ಟಿ ಉಪಸ್ಥಿತರಿದ್ದರು.
ದೀಪಕ್ ಥಮಕೆ ನಿರೂಪಿಸಿದರು. ಸಿದ್ರಾಮಯ್ಯಾ ಸ್ವಾಮಿ ವಂದಿಸಿದರು.