ಒಳಮೀಸಲಾತಿ ಜಾರಿಗಾಗಿ ಆ.1 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ : ಫರ್ನಾಂಡೀಸ್ ಹಿಪ್ಪಳಗಾಂವ್
ಬೀದರ್ : ರಾಜ್ಯಗಳು ಒಳಮೀಸಲಾತಿ ಜಾರಿ ಮಾಡಬಹುದೆಂದು 2024 ರ ಆ.1 ರಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿತ್ತು. ಆ ತೀರ್ಪಿಗೆ ಸುಪ್ರಿಂ ಕೋರ್ಟ್ ಬರುವ ಆ.1 ಕ್ಕೆ ಒಂದು ವರ್ಷ ತುಂಬುತ್ತದೆ. ಆದರೂ ನಮ್ಮ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲಿಲ್ಲ. ಹಾಗಾಗಿ ಬರುವ ಆ.1 ರಂದು ಅರೆಬೆತ್ತಲೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ್ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಕುಂಟು ನೆಪವೊಡ್ಡಿ ವಿಳಂಬ ಮಾಡುತ್ತಿದೆ. ಇದುವರೆಗೆ ಕೇವಲ ಶೇ.80 ರಷ್ಟು ಮಾತ್ರ ಜಾತಿ ಜನಗಣತಿ ಮಾಡಲಾಗಿದೆ. ಬೆಂಗಳೂರಲ್ಲಂತೂ ಅದು ಶೇ. 40 ರಷ್ಟು ಕೂಡ ದಾಟಲಿಲ್ಲ ಎಂದು ಆರೋಪಿಸಿದರು.
ಸಚಿವ ಎಚ್.ಸಿ ಮಹಾದೇವಪ್ಪ ಹೇಳಿದ ಹಾಗೆ ಸಿಎಂ ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಅವರಿಗೆ ಒಳಮೀಸಲಾತಿ ಜಾರಿ ಮಾಡುವ ಮನಸಿಲ್ಲ. ಮಾದಿಗ ಸಮುದಾಯದ ಸಚಿವರಿಗೆ ಮಾನ, ಮರಿಯಾದೆ ಇದ್ದರೆ ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಆ. 1 ರಂದು ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ್ ವೃತ್ತದ ಮೂಲಕ ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಈ ಪ್ರತಿಭಟನೆಯಲ್ಲಿ ಸುಮಾರು 2 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಒಳಮೀಸಲಾತಿಯ ಪರವಾಗಿರುವ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ವೀರಶೆಟ್ಟಿ, ರವೀಂದ್ರ ಸೂರ್ಯವಂಶಿ, ಜೈಶೀಲ್ ಮೇತ್ರೆ, ಡೇವಿಡ್ ವಾಡೇಕರ್, ವಿಶಾಲ್ ಜೋಶಿ, ಸಿದ್ರಾಮ್ ನಾವದಗೇರಿ, ಹರೀಶ್ ಗಾಯಕವಾಡ್, ಅಶೋಕ್ ಚಾಂಗಲೆರಾ ಹಾಗೂ ದಯಾನಂದ್ ರೇಕುಳಗಿ ಇದ್ದರು.