×
Ad

ಜನಿವಾರ ಪ್ರಕರಣ | ವಿದ್ಯಾರ್ಥಿ ಸುಚಿವ್ರತ್ ಗೆ ಬಿಕೆಐಟಿಯಲ್ಲಿ ಉಚಿತ ಸೀಟ್: ಈಶ್ವರ ಖಂಡ್ರೆ

Update: 2025-04-20 11:03 IST

ಬೀದರ್, ಎ.20: ಜನಿವಾರ ತೆಗೆಯದ ಕಾರಣಕ್ಕೆ ಕೆಸಿಇಟಿ ಗಣಿತ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿಗೆ ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ವಿದ್ಯಾಲಯ(ಬಿಕೆಐಟಿ)ದಲ್ಲಿ ಉಚಿತ ಪ್ರವೇಶ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದ್ದಾರೆ.

ಇಂದು ಬೆಳಗ್ಗೆ ಸಚಿವ ರಹೀಂಖಾನ್ ಜೊತೆಯಲ್ಲಿ ಸುಚಿವ್ರತ್ ಕುಲಕರ್ಣಿ ಮನೆಗೆ ಭೇಟಿ ನೀಡಿ ವಿದ್ಯಾರ್ಥಿ ಹಾಗೂ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿದ ಈಶ್ವರ ಖಂಡ್ರೆ, ಖಾಸಗಿ ಕಾಲೇಜಿನ ಸಿಬ್ಬಂದಿಯಿಂದ ಇಂತಹ ಲೋಪವಾಗಿದ್ದು, ಇದು ನೋವಿನ ಸಂಗತಿ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ. ಈ ಬಗ್ಗೆ ತಮ್ಮ ಗಮನಕ್ಕೆ ಬಂದ ಕೂಡಲೇ ತನಿಖೆ ನಡೆಸಿ 24 ಗಂಟೆಯೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೆ, ವರದಿ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವೂ ಆಗಿದೆ ಎಂದರು.

ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬುದು ಎಲ್ಲರ ಭಾವನೆ. ಹೀಗಾಗಿ ಭಾಲ್ಕಿಯ ತಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಸೀಟ್ ನೀಡುವುದಾಗಿ ಭರವಸೆ ನೀಡಿದರು. ಸುಚಿವ್ರತ್ ಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲು ಅವಕಾಶವಿದೆಯೇ ಎಂಬ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಈ ಬಗ್ಗೆ ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ಈಶ್ವರ ಖಂಡ್ರೆ, ವಿದ್ಯಾರ್ಥಿಗೆ ಕಾಮಡ್ ಕೆ ಪರೀಕ್ಷೆ ಬರೆಯಲೂ ಅವಕಾಶವಿದೆ. ಆ ಸೀಟು ಲಭಿಸಿದರೂ ನೆರವು ನೀಡಲಾಗುವುದು, ಸರಕಾರ ನೊಂದ ವಿದ್ಯಾರ್ಥಿ ಮತ್ತು ಕುಟುಂಬದ ಸದಸ್ಯರೊಂದಿಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News