×
Ad

ಬೀದರ್ | ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದಿದ್ದಾರೆ : ಸಚಿವ ಈಶ್ವರ್ ಖಂಡ್ರೆ

Update: 2025-11-08 19:27 IST

ಬೀದರ್ : ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದಿದ್ದಾರೆ ಎಂದು ಅರಣ್ಯ ಪರಿಸರ, ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು.

ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರು ಸಮಾಜದ ಅಂಕುಡೊಂಕು, ಅಸಮಾನತೆ ಜಾತಿ ವ್ಯವಸ್ಥೆಯನ್ನು ತಮ್ಮ ಕೀರ್ತನೆಗಳ ಮೂಲಕ ಹೋಗಲಾಡಿಸಿದರು. ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರು ಬಲ್ಲಿರಾ ಎಂದು ಹೇಳುತ್ತಾ ಜಾತಿ ವ್ಯವಸ್ಥೆಯನ್ನು ಕಟುವಾಗಿ ಖಂಡಿಸಿದ್ದಾರೆ. ಹಳ್ಳಿ ಹಳ್ಳಿಗೆ ಸಂಚಾರ ಮಾಡುವುದರ ಮೂಲಕ ಜನರಿಗೆ ಸತ್ಯ ಅಸತ್ಯತೆ ಬಗ್ಗೆ ಅರಿವು ಮೂಡಿಸಿದ್ದಾರೆ. ಮಹಾತ್ಮರು ಯಾವುದೇ ಒಂದು ಜಾತಿಗೆ ಸಂಬಂಧಿಸಿದವರಲ್ಲ. ಅವರು ಇಡೀ ಸಮಾಜದ ಏಳಿಗೆಗೆ ದುಡಿಯುವ ಮೂಲಕ ಸಮಾಜದಲ್ಲಿ ಸುಧಾರಣೆ ತಂದು ಶಾಂತಿ, ಸಮಾನತೆ, ಭಾತೃತ್ವ ಸಾರಿದ್ದಾರೆ ಎಂದರು.

ತಮ್ಮ ಸರಕಾರ ರೈತರ ಪರವಾಗಿದ್ದು, ಆದಷ್ಟು ಬೇಗ ಸರಕಾರದಿಂದ ಘೋಷಿಸಲ್ಪಟ ಹೆಚ್ಚುವರಿ 8,500 ರೂ. ಬೆಳೆ ಹಾನಿ ಪರಿಹಾರದ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.

ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮಾತನಾಡಿ, ಕನಕದಾಸರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ಸಾಗುವ ಮೂಲಕ ಜಾತಿ, ಕುಲ, ಮತ ಎನ್ನದೆ ಒಂದಾಗಿ ಬಾಳಬೇಕು ಎಂದು ಹೇಳಿದರು.

ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಜಾತಿ, ಕುಲಕ್ಕಿಂತ ಮಾನವ ಧರ್ಮ ದೊಡ್ಡದು ಎಂದು ವಿಶ್ವಕ್ಕೆ ಸಂದೇಶ ಸಾರಿದ ಕನಕದಾಸರು ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.  

ಮಾಜಿ ಸಚಿವ ಬಂಡೇಪ್ಪ ಖಾಶಂಪೂರ್ ಅವರು ಮಾತನಾಡಿ, ಕನಕದಾಸರು ಶ್ರೀಕೃಷ್ಣರ ಭಕ್ತರಾಗಿದ್ದರಿಂದ ಉಡುಪಿಗೆ ಹೋಗಿ ಕೃಷ್ಣನ ದರ್ಶನ ಪಡೆಯಲು ಹೋದಾಗ ಅವರಿಗೆ ದೇವಸ್ಥಾನದ ಒಳಗೆ ಬಿಡಲಿಲ್ಲ. ಅವಾಗ ಹೊರಗಡೆಯಿಂದ ಕೀರ್ತನೆ ಹಾಡುಗಳು ಹಾಡುತ್ತಿರುವಾಗ ಶ್ರೀ ಕೃಷ್ಣನೇ ಗೋಡೆ ಒಡದು ಮೂರ್ತಿ ತಿರುಗಿಸಿ ದರ್ಶನ ನೀಡಿದರು. ಆದ್ದರಿಂದ ಭಕ್ತಿ ಎನ್ನುವುದು ಅಂತರಾಳದಲ್ಲಿ ಇರಬೇಕೇ ಹೋರತು ತೋರಿಕೆಗಲ್ಲ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಪೂಜೆ ಸಲ್ಲಿಸಿ ನಂತರ ಬೊಮಗೊಂಡೇಶ್ವರ್ ವೃತ್ತದ ಬಳಿ ಕನಕದಾಸರ ಭಾವಚಿತ್ರ ಹೊತ್ತ ರಥ ಮೆರವಣಿಗೆಗೆ ಸಚಿವ ರಹೀಂ ಖಾನ್, ಶಾಸಕ ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೇಪ್ಪ ಖಾಶಂಪೂರ್, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಔಧತಪೂರದ ಶ್ರೀ ಮಚೇಂದ್ರ ಮುತ್ಯಾ, ಬೀದರ್‌ ತಹಶೀಲ್ದಾರ್ ರವೀಂದ್ರ ಧಾಮಾ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬೀದರ್ ಪ್ರಾದೇಶಿಕ ಕೇಂದ್ರದ ಉಪನ್ಯಾಸಕ ಡಾ. ಸಂಗಪ್ಪಾ ತಾಡಿ, ಸಮಾಜದ ಮುಖಂಡರಾದ ಬಾಬುರಾವ್ ಮಲ್ಕಾಪುರೆ, ಸಂಜುಕುಮಾರ್ ಅತಿಯಾಳ, ಪಂಡಿತರಾವ್ ಚಿದ್ರಿ, ಪೀರಪ್ಪಾ ಔರಾದ್ಕರ್, ಸಂಗಪ್ಪ ಮಲ್ಕಾಪುರೆ, ಸಂತೋಷ್ ಜೋಳ್ದಾಪಗಾ, ಹನುಮಂತ್ ಮಲ್ಕಾಪುರೆ, ವಿಜಯಕುಮಾರ್ ಸೋನಾರೆ ಹಾಗೂ ರಾಜಕುಮಾರ್ ಕಂದಗುಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News