×
Ad

ಮಳೆ ಹಾನಿ ಪ್ರದೇಶಗಳಿಗೆ ಸಚಿವ ರಹೀಮ್ ಖಾನ್ ಭೇಟಿ : ಸರ್ವೆ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ

Update: 2025-08-23 20:26 IST

ಬೀದರ್ : ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಹಾನಿಗಿಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರು ಸರ್ವೆ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಬೀದರ್ ತಾಲೂಕಿನ ಗ್ರಾಮಗಳಾದ ಮಾಲೆಗಾಂವ್, ಚಿಲ್ಲರ್ಗಿ, ಗಾದಗಿ, ಯರನಳ್ಳಿ ಮತ್ತು ಸಾಂಗ್ವಿಗೆ ಭೇಟಿ ನೀಡಿದ ಅವರು, ಹಾನಿಗಿಡಾದ ಮನೆ, ರಸ್ತೆ, ಬೆಳೆ ಮುಂತಾದವುಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಮಾನ್ಯ ಮಳೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದೆ. ಇದರಿಂದಾಗಿ ಅನೇಕ ರೀತಿಯ ಸಮಸ್ಯೆಗಳನ್ನು ಸೃಷ್ಟಿಸಿದೆ. ತೀವ್ರ ಹಾನಿಗಿಡಾದ ಮನೆಗಳಿಗೆ ತಕ್ಷಣ 7 ರಿಂದ 10 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ನಂತರ ಸರ್ವೆ ಕೈಗೊಂಡು ಪೂರ್ಣ ಪರಿಹಾರ ನೀಡಲಾಗುವುದು ಎಂದರು.

ಬೆಳೆಗಳ ಹಾನಿ ಬಗ್ಗೆ ಈಗಾಗಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರಿಗೆ ಸರ್ವೆ ಮಾಡಿ ವರದಿ ನೀಡಲು ಸೂಚನೆ ನೀಡಲಾಗಿದೆ. ನಾನು ಕೂಡ ಮುಖ್ಯಮಂತ್ರಿ, ಕೃಷಿ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾನಿಯ ಬಗ್ಗೆ ತಿಳಿಸಿದ್ದೇನೆ. 100 ರಿಂದ 200 ಕೋಟಿ ರೂ. ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಚಿಲ್ಲರ್ಗಿಯಲ್ಲಿ 7 ಮನೆ, ಗಾದಗಿಯಲ್ಲಿ 5 ಮನೆ, ಹಮಿಲಾಪೂರನಲ್ಲಿ 6 ಮನೆಗಳು ಹಾನಿಯಾಗಿವೆ. ಹಾಗೆಯೇ ರೈತರು ಬೆಳೆದ ಹೆಸರು, ಉದ್ದು ಮತ್ತು ಸೋಯಾ ಹೆಚ್ಚು ಹಾನಿಗೆ ಒಳಗಾಗಿದ್ದು, ಕೆಲವು ಕಡೆಗೆ ತೊಗರಿ ಬೆಳೆ ಕೂಡ ಹಾನಿಯಾಗಿದೆ. ಹಾನಿಯಾದ ಬೆಳೆಗಳ ಬಗ್ಗೆ ಸರ್ವೆ ಮಾಡಿ ಪರಿಹಾರ ನೀಡಲಾಗುವುದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಬೀದರ್ ಸಹಾಯಕ ಆಯುಕ್ತ ಮೊಹಮದ್ ಶಕೀಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ, ತಹಸಿಲ್ದಾರ್ ರವೀಂದ್ರ ಧಾಮಾ, ತಾಲೂಕು ಪಂಚಾಯತ್ ಇಓ ಮಾಣಿಕರಾವ್ ಪಾಟೀಲ್, ಕೃಷಿ ಇಲಾಖೆಯ ಉಪ ನಿರ್ದೇಶಕ ಇಕ್ಬಾಲ್ ಅನ್ಸಾರಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News