ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ರಹೀಮ್ ಖಾನ್ ಭೇಟಿ, ಪರಿಶೀಲನೆ
ಬೀದರ್ : ತಾಲ್ಲೂಕಿನ ಜನವಾಡ, ಹಿಪ್ಪಳಗಾಂವ್, ಕನಳ್ಳಿ, ಶ್ರೀಮಂಡಲ್, ಕಂಗಟಿ, ಬಸಂತಪುರ್, ಚಿಮಕೋಡ್, ಪತೇಪೂರ್, ಖಾಜಾಪೂರ ಮತ್ತು ಚಾಂಬೋಳ್ ಗ್ರಾಮ ಮತ್ತು ಸೇತುವೆ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಮ್ ಖಾನ್ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಭೇಟಿಯ ನಂತರ ಮಾತನಾಡಿದ ಅವರು, ಭಾರೀ ಮಳೆಯಿಂದಾಗಿ ರೈತರು ಬೆಳೆದ ಹೆಸರು, ಉದ್ದು, ಸೋಯಾಬೀನ್, ತೋಗರಿ ಸಂಪೂರ್ಣವಾಗಿ ನಾಶವಾಗಿವೆ. ವಿವಿಧ ಗ್ರಾಮಗಳಲ್ಲಿ ಮನೆಗಳು ಕುಸಿದಿವೆ ಎಂದು ತಿಳಿಸಿದ ಅವರು, ಪ್ರತಿಯೊಂದು ವಿಪತ್ತು ಮತ್ತು ಹಾನಿಯ ವರದಿ ಮಾಡಿ ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಲು ಅಂತರ್ ಇಲಾಖಾ ಸಮೀಕ್ಷೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬೆಳೆ ಹಾನಿ ಮತ್ತು ಮನೆ ಹಾನಿಗೆ ಎಸ್‍ಡಿಆರ್‌ಎಫ್ ಮತ್ತು ಎನ್‍ಡಿಆರ್‌ಎಫ್ ಅಡಿಯಲ್ಲಿ ತಕ್ಷಣ ಪರಿಹಾರ ನೀಡಲಾಗುವುದು. ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಪರಿಸ್ಥಿತಿ ಬಗ್ಗೆ ತಿಳಿಸಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಸಾರ್ವಜನಿಕರು ನದಿ , ಕೆರೆಗಳಿಂದ ದೂರ ಇರಬೇಕು. ಯಾವುದೇ ಅಪಾಯವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಬೀದರ್ ಸಹಾಯಕ ಆಯುಕ್ತ ಮೊಹಮದ್ ಶಕೀಲ್, ತಹಶೀಲ್ದಾರ್ ರವೀಂದ್ರ ಧಾಮಾ ಹಾಗೂ ಕೃಷಿ ಇಲಾಖೆಯ ಉಪ ನಿರ್ದೇಶಕ ಇಕ್ಬಾಲ್ ಅನ್ಸಾರಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.