×
Ad

ಬೀದರ್ | ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಮೆಟ್ಟಿಲಾಗೋಣ : ಪ್ರೇಮಸಾಗರ್ ದಾಂಡೆಕರ್

Update: 2025-10-12 19:49 IST

ಬೀದರ್ : ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ನಾವೆಲ್ಲರೂ ಮೆಟ್ಟಿಲಾಗೋಣ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾಧಿಕಾರಿ ಪ್ರೇಮಸಾಗರ್ ದಾಂಡೆಕರ್ ಹೇಳಿದರು.

ನಗರದ ಜ್ಞಾನ ಸೂರ್ಯ ಸ್ಪರ್ಧಾ ಅಕಾಡೆಮಿ ಎನ್ನುವ ಕೋಚಿಂಗ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರೇಮಸಾಗರ್ ದಾಂಡೆಕರ್, ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ಹೋಗಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆಯುತ್ತಾರೆ. ಹಾಗಾಗಿ ಅವರಿಗೆ ಕಷ್ಟವಾಗುತ್ತದೆ. ಆದ್ದರಿಂದ ನಮ್ಮ ಜಿಲ್ಲೆಯಲ್ಲಿಯೇ ಈ ತರಬೇತಿ ಕೇಂದ್ರ ಉದ್ಘಾಟನೆ ಮಾಡಲಾಗಿದೆ. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವಿದ್ದರೂ ಕೂಡ ಅವರು ಏನನ್ನು ಓದಬೇಕು ಎನ್ನುವ ಗೊಂದಲದಲ್ಲಿದ್ದಾರೆ. ವಿದ್ಯಾರ್ಥಿಗಳಲ್ಲಿನ ಆ ಗೊಂದಲವನ್ನು ನಿವಾರಣೆ ಮಾಡಿ ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಈ ತರಬೇತಿ ಕೇಂದ್ರದ್ದಾಗಿದೆ. ಮುಖ್ಯವಾಗಿ ವಸತಿ ನಿಲಯದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈಗಾಗಲೇ ಪ್ರವೇಶ ಪಡೆಯುವುದಕ್ಕಾಗಿ 30 ರಿಂದ 40 ವಿದ್ಯಾರ್ಥಿಗಳು ಕರೆ ಮಾಡಿ ಕೇಳಿದ್ದಾರೆ ಎನ್ನುವ ಮಾಹಿತಿ ಇದೆ. ಇದೇ ತಿಂಗಳ 15ನೇ ತಾರೀಕಿನಂದು ತರಗತಿ ಪ್ರಾರಂಭಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ನಿವೃತ್ತ ಎಸ್‌ಪಿ ವಿ. ಎಂ ಜ್ಯೋತಿ ಅವರು ಮಾತನಾಡಿ, ರಕ್ಷಣಾ ವಲಯ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಹುದ್ದೆಗಳು ಬಿಟ್ಟರು ಕೂಡ ನಮ್ಮ ವಿದ್ಯಾರ್ಥಿಗಳಿಗೆ ಅದು ಗೊತ್ತಾಗುವುದಿಲ್ಲ. ಅವುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಆ ಹುದ್ದೆಗಳನ್ನು ಪಡೆಯಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಂತೆ ಸಂಘ ರಖ್ಖಿತ ದಿವ್ಯ ಸಾನಿಧ್ಯ ವಹಿಸಿದ್ದರು. ನಿವೃತ್ತ ಕ್ಷೇತ್ರ ಶಿಕ್ಷಣ ಅಧಿಕಾರಿ ಟಿ. ಆರ್ ದೊಡ್ಡೆ, ಶಾಮಸುಂದರ್ ಖಾನಾಪುರಕರ್, ನಿವೃತ್ತ ಡಿವೈಎಸ್ಪಿ ವಿಜಯಕುಮಾರ್ ಹೊಸಮನಿ, ಕಾಶೀನಾಥ್ ಚಲ್ವಾ, ಸುಭಾಷ್, ಆಶೀಶ್ ಎಸ್, ಪ್ರದೀಪ್ ನಾಟೆಕರ್, ಸಾಗರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News