×
Ad

ಬೀದರ್: ಒಳಮಿಸಲಾತಿ ಜಾರಿಗೆ ಆಗ್ರಹಿಸಿ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ

Update: 2025-08-01 20:43 IST

ಬೀದರ್: ಒಳಮಿಸಲಾತಿ ಜಾರಿಗೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಆದೇಶ ನೀಡಿ ಇವತ್ತಿಗೆ ಒಂದು ವರ್ಷ ಕಳೆದರೂ ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಲಿಲ್ಲ ಎಂದು ಇಂದು (ಶುಕ್ರವಾರ) ಮಾದಿಗ ಸಂಘಟನೆಗಳ ಒಕ್ಕೂಟದಿಂದ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಇಂದು ಅಂಬೇಡ್ಕರ್ ವೃತ್ತದಿಂದ ತಾತ್ಕಾಲಿಕವಾಗಿ ನಡೆಸುತ್ತಿರುವ ಜಿಲ್ಲಾಧಿಕಾರಿ ಕಚೇರಿವರೆಗೆ ಮಾದಿಗ ಸಂಘಟನೆಗಳ ನೂರಾರು ಜನ ಅರೆಬೆತ್ತಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದರು. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಹೊತ್ತು ಘೋಷಣೆ ಕೂಗಲಾಯಿತು. ಕೆಲವೊಬ್ಬರು ರಸ್ತೆಯಲ್ಲಿಯೇ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾದಲ್ಲಿ ಅಳವಡಿಸಿದ ಬ್ಯಾರಿಕೇಡ್ ಮೇಲೆ ಹತ್ತಿದ ಪ್ರತಿಭಟನಾಕಾರರು ಕೆಲ ಹೊತ್ತು ಕಚೇರಿಯೊಳಗಡೆ ನುಗ್ಗಲು ಪ್ರಯತ್ನಿಸಿದರು.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರದಲ್ಲಿ, ನಾಗಮೋಹನ್ ದಾಸ್ ಆಯೋಗಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಪರಿಶಿಷ್ಟ ಜಾತಿಗಳ ಮೀಸಲಾತಿ ಹಂಚಿಕೆಯಲ್ಲಿ ಉಂಟಾಗಿರುವ ಅಸಮಾನತೆ ಮತ್ತು ಸಮುದಾಯಗಳ ನಡುವಿನ ಹಿಂದುಳಿದಿರುವಿಕೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲು ಆಯೋಗ ಎಲ್ಲ ಇಲಾಖೆಗಳಿಗೆ ಅಗತ್ಯ ಮಾಹಿತಿಯನ್ನು ಜನವರಿಯಲ್ಲಿ ಕೇಳಿತ್ತು. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ಆರು ತಿಂಗಳಾದರು ಸರಿಯಾದ ಮಾಹಿತಿ ಆಯೋಗಕ್ಕೆ ಬಂದಿಲ್ಲ. ಕೆಲವು ಇಲಾಖೆಗಳ ಮಾಹಿತಿ ಅಪೂರ್ಣವಾಗಿದೆ. ಆಯೋಗ ನೆಡಸಿದ ಸಮೀಕ್ಷೆ, ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆಗಳು ಗೊಂದಲದ ಗುಡಾಗಿ ನಗೆಪಾಟಲಿಗೆ ಈಡಾಯಿತು. ಮೂರುವಾರದಲ್ಲಿ ಸಮೀಕ್ಷೆ ಮುಗಿಸಿ ವರದಿ ಸಿದ್ಧಪಡಿಸಲಾಗುವುದು ಎಂಬ ಸರ್ಕಾರದ ಹೇಳಿಕೆ ಕಿಮ್ಮತ್ತು ಕಳೆದುಕೊಂಡಿದೆ ಎಂದು ಆರೋಪಿಸಲಾಗಿದೆ. ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೊಳಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದು ನಮ್ಮ ಸಮುದಾಯದಲ್ಲಿ ತೀವ್ರ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ವಿಳಂಬ ನೀತಿಯಿಂದಾಗಿ ನಮ್ಮ ಸಮುದಾಯದ ವಿದ್ಯಾರ್ಥಿ, ಉದ್ಯೋಗಾಕಾಂಕ್ಷಿ, ಕಾರ್ಮಿಕರು ಹಾಗೂ ಮಹಿಳೆಯರು ಹಾಗೂ ಒಟ್ಟಾರೆ ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಲಾಗಿದೆ.

ಬೀದರ್ ಜಿಲ್ಲೆಯ ಒಳಮೀಸಲಾತಿ ಹೋರಾಟಗಾರರ ಮೇಲೆ ರೌಡಿ ಶೀಟರ್ ಪ್ರಕರಣ ದಾಖಲು ಮಾಡಲಾಗಿದೆ. ಹೋರಾಟಗಾರರ ಮೇಲೆ ರೌಡಿ ಶೀಟರ್ ಹಾಕಿ ಹೋರಾಟ ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಹಾಗಾಗಿ ಹೋರಾಟಗಾರರ ಮೇಲಿನ ರೌಡಿ ಶೀಟರ್ ಪ್ರಕರಣ ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಜೂನ್ ತಿಂಗಳಲ್ಲಿ ಬೀದರ್ ನ ಶರಣ ನಗರದಲ್ಲಿ 10 ಅಡಿ ಆಳದ ಒಳಚರಂಡಿಗೆ ಸುರಕ್ಷತಾ ಪರಿಕರಗಳು ಇಲ್ಲದೆ ವ್ಯಕ್ತಿಯನ್ನು ಇಳಿಸಿದ ಘಟನೆ ಖಂಡನೀಯವಾಗಿದೆ. ಇದು ಪೌರಾಡಳಿತ ಸಚಿವರ ತವರಲ್ಲೇ ನಡೆದಿರುವುದು ಶೋಚನಿಯವಾಗಿದೆ. ಆದ್ದರಿಂದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರನ್ನು ಸೇವೆಯಿಂದ ಅಮಾನತ್ತು ಮಾಡಿ ಗುತ್ತಿಗೆದಾರನ ಪರವಾನಿಗೆಯನ್ನು ರದ್ದುಪಡಿಸಬೇಕು. ಒಳಚರಂಡಿಗೆ ಇಳಿದ ಸ್ವಚ್ಚತಾ ಕರ್ಮಿಯನ್ನು ಪುರ್ನವಸತಿ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಜನಾಕ್ರೋಶವು ಉಗ್ರಸ್ವರೂಪ ತಾಳುವುದು ನಿಶ್ಚಿತವಾಗಿದೆ. ಒಂದು ವೇಳೆ ಸರ್ಕಾರವು ಬೇಡಿಕೆಯನ್ನು ಈಡೇರಿಸಲು ವಿಫಲವಾದರೆ, ನಮ್ಮ ಹಕ್ಕುಗಳಿಗಾಗಿ ಕರ್ನಾಟಕದಾದ್ಯಂತ ಇರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿ, ಕಾರ್ಮಿಕ, ವಕೀಲ, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಒಗ್ಗೂಡಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಅಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್, ಆದಿ ಜಾಂಭವ ಸಂಘದ ರಾಜ್ಯ ಉಪಾಧ್ಯಕ್ಷ ರಾಜು ಕಡ್ಯಾಳ್, ಮಾದಿಗ ದಂಡೋರಾ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಿಪ್ಪಳಗಾಂವ್, ಉಪಾಧ್ಯಕ್ಷ ಕಮಲಾಕರ್ ಎಲ್ ಹೆಗಡೆ, ಡಿ.ಎಂ.ಎಸ್.ಎಸ್ ಜಿಲ್ಲಾಧ್ಯಕ್ಷ ಪರಮೇಶ್ವರ್ ಕಾಳಮಂದರಗಿ, ಪ್ರಭುರಾವ ತಾಳಮಡಗಿ, ಹರೀಶ್ ಗಾಯಕವಾಡ್, ಜಾಪೇಟ್‌ರಾಜ್ ಕಡ್ಯಾಳ್, ವಿಶಾಲ್ ಜೋಶಿ, ದತ್ತಾತ್ರಿ ಜ್ಯೋತಿ, ಸ್ವಾಮಿದಾಸ್ ಮೇಘಾ, ಜಯಶೀಲ್ ಮೇತ್ರೆ, ರವಿ ನಿಜಾಂಪೂರೆ, ವಿಜಯಕುಮಾರ್ ಸೂರ್ಯವಂಶಿ, ಸುಧಾಕರ್ ಸೂರ್ಯವಂಶಿ, ಪೀಟರ್ ಶ್ರೀಮಂಡಲ್, ವೀರಾಶೇಟ್ಟಿ ಬಂಬಳಗಿ, ಸಚೀನ್ ಅಂಬೇಸಿಂಗೆ, ಜಯಶೀಲ್ ಕಲವಾಡೆ, ಗೋರಖ್ ನಿಂಬೂರ್, ಉಮೇಶ್ ಗುತ್ತೆದಾರ್, ರವೀಂದ್ರ ಸೂರ್ಯವಂಶಿ, ಲಾಲಪ್ಪ ರಾಂಪೂರೆ, ಸ್ವಾಮಿದಾಸ್ ಚಂಡಕೆ, ತುಕಾರಾಮ್ ಲಾಡೆ, ದಯಾನಂದ್ ರೇಕುಳಗಿ, ರಾಜು ಸಾಂಗ್ಲೆ ಹಾಗೂ ಪ್ರಕಾಶ್ ಬಗದಲ್ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News