ಬೀದರ್, ಹೈದರಬಾದ್ ನಲ್ಲಿ ಗುಂಡಿನ ದಾಳಿ ಪ್ರಕರಣದ ಅಪರಾಧಿಗಳ ಶೀಘ್ರ ಬಂಧನ : ಎಡಿಜಿಪಿ ಹರೀಶ್ ಶೇಖರನ್
ಬೀದರ್ : ನಿನ್ನೆ ಬೆಳಿಗ್ಗೆ ನಗರದಲ್ಲಿ ಎಟಿಎಂ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ದುಡ್ಡು ದೋಚಿದ ಅಪರಾಧಿಗಳನ್ನು ತಕ್ಷಣವೇ ಬಂಧಿಸಲಾಗುವುದು ಎಂದು ಕ್ರೈಮ್ ಎಡಿಜಿಪಿ ಹರೀಶ್ ಶೇಖರನ್ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸುಮಾರು 10:55 ರಿಂದ 11:05 ರ ನಡುವೆ ಈ ಘಟನೆ ನಡೆದಿದೆ. ಬ್ಯಾಂಕಿನಿಂದ ಎಟಿಎಂಗೆ ಹಣ ಸಾಗಿಸುತ್ತಿರುವಾಗ ಎಟಿಎಂ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ ಅಪರಿಚಿತರಿಬ್ಬರು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಿರೀಶ್ ಎಂಬ ಯುವಕ ಮೃತಪಟ್ಟಿದ್ದು, ಶಿವಕುಮಾರ್ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಒಟ್ಟು 87 ಲಕ್ಷ ರೂ. ದರೋಡೆಯಾಗಿದೆ. 4 ಲಕ್ಷ ರೂ. ದರೋಡೆ ಮಾಡಿಕೊಂಡು ಹೋಗುವಾಗ ಕೆಳಗಡೆ ಬಿದ್ದಿದ್ದು, ಕೆಳಗೆ ಬಿದ್ದ ಆ ಹಣವನ್ನು ಸತೀಶ್ ಎಂಬ ವ್ಯಕ್ತಿ ನಮಗೆ ತಲುಪಿಸಿದ್ದಾರೆ. ಆದರೆ ಎಷ್ಟು ಹಣ ದರೋಡೆಯಾಗಿದೆ ಎಂದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಲಿದೆ ಎಂದರು.
ಗುಲ್ಬರ್ಗ ವಿಭಾಗದ ಡಿಐಜಿ ಅಜಯ್ ಹಿಲ್ಲೋರಿ ಹಾಗೂ ಎಸ್ಪಿ ಪ್ರದೀಪ್ ಗುಂಟಿ ಅವರ ನೇತೃತ್ವದಲ್ಲಿ ಸುಮಾರು ಎಂಟು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಕೆಲಸ ಮಾಡುತ್ತಿವೆ. ಆರೋಪಿಗಳು ಯಾರು ಎಂಬುದನ್ನು ಖಚಿತಪಡಿಸಲಾಗಿದೆ. ಅವರನ್ನು ಬಂಧಿಸಲು ಈಗಾಗಲೇ ತಂಡವನ್ನು ಕಳುಹಿಸಿದ್ದೇವೆ. ಹೈದಾರಾಬಾದ್ ಕ್ರೈಮ್ ಟೀಮ್ ಜೊತೆಗೆ ಚರ್ಚೆ ಮಾಡಿ ಎಲ್ಲಿ ಇದ್ದಾರೆ ಎಂದು ಪತ್ತೆ ಮಾಡುತಿದ್ದೇವೆ.
ಇದರಲ್ಲಿ ಕ್ರೈಮ್ ಟೀಮ್, ಟೆಕ್ನಿಕಲ್ ಟೀಮ್ ಎಲ್ಲ ಸೇರಿ ಕೆಲಸ ಮಾಡುತಿದ್ದೇವೆ. ಘಟನೆಯಲ್ಲಿ ಇಬ್ಬರು ಆರೋಪಿಗಳು ಭಾಗಿಯಾಗಿದ್ದಾರೆ. ಆರೋಪಿಯು ಇದೆ ರೀತಿಯ ಹಲವಾರು ಕ್ರೈಮ್ ಗಳಲ್ಲಿ ಭಾಗಿಯಾಗಿದ್ದಾನೆ ಎನ್ನುವ ಮಾಹಿತಿ ನಮ್ಮಲ್ಲಿ ಇದೆ. ನಮ್ಮ ಅಧಿಕಾರಿಗಳು ತಕ್ಷಣವೇ ಇವರನ್ನು ಬಂಧಿಸುವ ಕ್ರಮ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ಘಟನೆಯಾದ ನಂತರ ನಾವು ಬೀದರ್, ಗುಲ್ಬರ್ಗಾ ಹಾಗೂ ಹೈದರಬಾದ್ ನಗರಗಳಲ್ಲಿ ಸಂಪೂರ್ಣವಾಗಿ ಅಲರ್ಟ್ ಆಗಿದ್ದೆವು. ಆರೋಪಿಗಳು ಹೈದಾರಾಬಾದ್ ನಗರದಿಂದ ಬೇರೆ ಕಡೆಗೆ ಹೋಗುವುದಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಅಲ್ಲಿಯೂ ಕೂಡ ಗುಂಡು ಹಾರಿಸಿ ಒಬ್ಬ ವ್ಯಕ್ತಿಗೆ ಗಾಯಗೋಳಿಸಿದ್ದಾರೆ ಎನ್ನುವ ಮಾಹಿತಿ ನಮಗೆ ಸಿಕ್ಕಿದೆ. ಹಾಗಾಗಿ ಹೈದರಬಾದ್ ನಲ್ಲಿಯೂ ಪ್ರಕರಣ ದಾಖಲಾಗಿದೆ.
ಹೈದರಬಾದ್ ಕಂಟ್ರೋಲ್ ರೂಮಿಗೂ ನಾವು ಮಾಹಿತಿ ನೀಡಿದ್ದೇವೆ. ಅಲ್ಲಿನ ಎಲ್ಲ ಪೊಲೀಸ್ ಠಾಣೆಯಲ್ಲಿ ಅಲರ್ಟ್ ಮಾಡಲಾಗಿದೆ. ಈ ಪ್ರಕರಣವನ್ನು ಹೈದರಬಾದ್ ಪೊಲೀಸ್ ಹಾಗೂ ನಾವು ಜಂಟಿ ಕಾರ್ಯಾಚರಣೆ ಮಾಡುತಿದ್ದೇವೆ ಎಂದು ಅವರು ಹೇಳಿದರು.