×
Ad

ಬೀದರ್ | ಪೋಕ್ಸೋ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆಯಾಗಲಿ : ಸೋಮನಾಥ್ ಪಾಟೀಲ್

Update: 2025-09-09 22:42 IST

ಬೀದರ್: ಹುಮನಾಬಾದ್ ತಾಲೂಕಿನ ಶಾಲೆಯೊಂದರಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದ್ದು, ಈ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆಯಾಗಬೇಕು. ಅತ್ಯಾಚಾರ ಎಸಗಿದ ಆರೋಪಿ ಶಿಕ್ಷಕ ರಯಿಸ್ ಶೇಖ್‌ನನ್ನು ಗಲ್ಲಿಗೇರಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಅವರು ಆಗ್ರಹಿಸಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆ.28 ರಂದು ಹುಮನಾಬಾದ್ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದು, ಪೋಕ್ಸೋ ಪ್ರಕರಣ ದಾಖಲಾಗಿದೆ. ಈ ಶಿಕ್ಷಕ ಆ ಬಾಲಕಿ ಅಲ್ಲದೇ ಇನ್ನು 3 ರಿಂದ 4 ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಇದೊಂದು ಘೋರವಾದ ಕೃತ್ಯವಾಗಿದ್ದು, ಆತನನ್ನು ಕಠಿಣ ಶಿಕ್ಷೆ ನೀಡಬೇಕು ಎಂದರು.

ಹುಮನಾಬಾದ್ ನ ಶಾಸಕ ಸಿದ್ದು ಪಾಟೀಲ್ ಅವರು ಮಾತನಾಡಿ, ನಮ್ಮ ತಾಲೂಕಿನಲ್ಲಿ ಇಂತಹ ಪ್ರಕರಣ ನಡೆದರೂ ತನಿಖೆ ಕುರಿತು ಪೊಲೀಸರು ನಮಗೆ ಏನೂ ತಿಳಿಸುತ್ತಿಲ್ಲ. ಪೊಲೀಸ್ ಅಧಿಕಾರಿಗಳ ಮೇಲೆ ನಮಗೆ ನಂಬಿಕೆ ಇಲ್ಲದಾಗಿದೆ. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ತಿಳಿಸಿದರು.

ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹಿಂದುಗಳೆಂದರೆ ಶತ್ರುತ್ವ ಭಾವನೆ ಇದೆ. ಪೋಲಿಸ್‌ ತಾವು ಮಾಡಿದ ಪ್ರತಿಜ್ಞೆಯಂತೆ ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡಬೇಕು. ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಬೇಕು ಎಂದು ಹೇಳಿದರು.

ಬಸವಕಲ್ಯಾಣ ಶಾಸಕ ಶರಣು ಸಲಗರ್ ಅವರು ಮಾತನಾಡಿ, ಆರೋಪಿ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಬಿಡುಗಡೆಯಾಗಿದೆ. ನಾನೇ ನಾಲ್ಕು ಜನ ಹುಡುಗಿಯರನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದೇನೆ ಎಂದು ಹೇಳಿದರೂ ತನಿಖೆಯಾಗುವುದಿಲ್ಲ. ಇದರಲ್ಲಿ ಕೆಲ ಶಾಲಾ ಆಡಳಿತ ಮಂಡಳಿಯವರ ಕೈವಾಡ ಇರುವ ಶಂಕೆ ಇದೆ. ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಈಶ್ವರಸಿಂಗ್ ಠಾಕೂರ್, ದಿಗಂಬರರಾವ್ ಮಾನಕಾರಿ, ರಾಜಶೇಖರ್ ನಾಗಮೂರ್ತಿ, ಬಸವರಾಜ್ ಪವಾರ್, ಶಿವು ಲೊಖಂಡೆ, ಮಾಧವ್ ಹಸೂರೆ, ಕಿರಣ್ ಪಾಟೀಲ್, ಲುಂಬಿಣಿ ಗೌತಮ್ ಹಾಗೂ ಶ್ರೀನಿವಾಸ್ ಚೌಧರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News