×
Ad

ವಿವಿಧ ಕಳ್ಳತನ ಪ್ರಕರಣ | ಮಾದಕ ವಸ್ತು, ಬೈಕ್ ಸೇರಿ ಇತರ ವಸ್ತು ಜಪ್ತಿ, ಆರೋಪಿಗಳ ಬಂಧನ : ಎಸ್ಪಿ ಪ್ರದೀಪ್ ಗುಂಟಿ

Update: 2025-08-22 16:40 IST

ಬೀದರ್ : ವಿವಿಧ ಪ್ರಕರಣ ಭೇದಿಸಿ ಮಾದಕ ವಸ್ತು, ಕಳುವಾದ ಬೈಕ್ ಗಳು ಹಾಗೂ ಚಿನ್ನ ಸೇರಿದಂತೆ ಒಟ್ಟು 15 ಲಕ್ಷ 55 ಸಾವಿರ ರೂ. ಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತಿಳಿಸಿದರು.

ಇಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಕಚೇರಿಯ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾರ್ಕೆಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ದೀನದಯಾಳ ನಗರ (ಮಾಂಗರವಾಡಿ ಗಲ್ಲಿ) ದ ಹನುಮಾನ ಮಂದಿರದ ಒಂದು ಮನೆಯ ಹತ್ತಿರ ಇಬ್ಬರು ವ್ಯಕ್ತಿಗಳು ಬಾಟಲ್ ಹಾಗೂ ಗುಳಿಗೆ ಮಾರಾಟ ಮಾಡುವುದು ಕಂಡು ಬಂದಿತ್ತು. ಅವರ ಮನೆ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದು ವಿಚಾರಿಸಿದಾಗ ಹೈದ್ರಾಬಾದ್ ನ ಬಿ. ಎಚ್. ಇ. ಎಲ್ ಏರಿಯಾದ ಒರ್ವ ವ್ಯಕ್ತಿ ಈ ಮಾದಕ ವಸ್ತುಗಳು ಮಾರಾಟಕ್ಕಾಗಿ ಮಾದಕ ವಸ್ತುಗಳನ್ನು ನೀಡಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ ಎಂದು ಹೇಳಿದರು.

ಆರೋಪಿಗಳಿಂದ ಒಟ್ಟು 1 ಲಕ್ಷ 48 ಸಾವಿರ ರೂ. ಕ್ಕೂ ಅಧಿಕ ಮೌಲ್ಯದ ಮಾದಕ ದ್ರವ್ಯ ಹಾಗೂ ಗುಳಿಗೆಗಳು ವಶಕ್ಕೆ ಪಡೆಯಲಾಗಿದೆ. ಹಾಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೊರ್ವ ಆರೋಪಿಯ ಪತ್ತೆಗಾಗಿ ಅಪರಾಧ ವಿಭಾಗದ ತಂಡ ರಚಿಸಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದರು.

ಚಿಟಗುಪ್ಪಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣ ಭೇಧಿಸಿ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಚಿಟಗುಪ್ಪಾ ಅಲ್ಲದೇ ಬಸವಕಲ್ಯಾಣ, ಕಲಬುರಗಿ ಜಿಲ್ಲೆಯ ಸುಲೇಪೇಟ್, ನರೋಣ, ರಟಕಲ್ ಹಾಗೂ ಕಮಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯು ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಸುಮಾರು 9 ಲಕ್ಷ 25 ಸಾವಿರ ರೂ. ಬೆಲೆ ಬಾಳುವ 13 ಬೈಕ್ ಗಳು ವಶಕ್ಕೆ ಪಡೆದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಬೀದರ್ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ನಡೆದ ಕಳ್ಳತನ ಪ್ರಕರಣ ಭೇಧಿಸಿ, ನಾಲ್ಕು ತೊಲೆ ಬೆಳ್ಳಿ ಕಾಲಕಡಗ, 10 ಗ್ರಾಂ ಚಿನ್ನದ ಮಂಗಳಸೂತ್ರದ ಗುಂಡು, 5 ಗ್ರಾಂ ಚಿನ್ನದ ಕಿವಿಯ ಹೂ ಹಾಗೂ ಸರಪಳಿ, 4 ಗ್ರಾಂ ಚಿನ್ನದ ಉಂಗುರು ಹಾಗೂ 10 ಗ್ರಾಂ ಚಿನ್ನದ ಲಾಕೇಟ್ ಹೀಗೆ ಒಟ್ಟು 1 ಲಕ್ಷ 57 ಸಾವಿರ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ಬೇಮಳಖೇಡಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಜಾನುವಾರುಗಳ ಕಳ್ಳತನ ಪ್ರಕರಣದಲ್ಲಿ ದೇವಗಿರಿ ತಾಂಡಾದ ಒರ್ವ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯು ಜಾನುವಾರು ಕಳ್ಳತನ ಮಾಡಿ ತೆಲಂಗಾಣ ರಾಜ್ಯದ ಜಹಿರಾಬಾದ್ ನಲ್ಲಿ ಮಾರಾಟ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಆತನಿಂದ 25 ಸಾವಿರ ರೂ. ನಗದು ಹಣ ಮತ್ತು ಕೃತ್ಯಕ್ಕೆ ಬಳಸಲಾದ ಸುಮಾರು 3 ಲಕ್ಷ ರೂ. ಗೆ ಬೆಲೆ ಬಾಳುವ ಒಂದು ಅಶೋಕ್ ಲೈಲ್ಯಾಂಡ್ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ, ಸಿಪಿಐ ಫಾಲಕ್ಷಯ್ಯ ಹಿರೇಮಠ್, ಸಿಪಿಐ ಶ್ರೀನಿವಾಸ್ ಅಲ್ಲಾಪುರ್ ಹಾಗೂ ಪಿಎಸ್ಐ ತಸ್ಲೀಮಾ ಬೇಗಂ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News