ಸಾಹಿತಿಗಳು ಹೆಚ್ಚಿನ ರೀತಿಯಲ್ಲಿ ಜನಪರ ಸಾಹಿತ್ಯ ರಚಿಸಬೇಕು : ಡಾ.ಪುರುಷೋತ್ತಮ ಬಿಳಿಮಲೆ
ಬೀದರ್ : ಸಾಹಿತಿಗಳು ಕಥೆ, ಕವನ, ಕಾದಂಬರಿ ಹಾಗೂ ಲೇಖನಗಳ ಜೊತೆಗೆ ಜನಪರ ಸಾಹಿತ್ಯವು ಹೆಚ್ಚಿನ ರೀತಿಯಲ್ಲಿ ರಚಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ನುಡಿದರು.
ಬೀದರ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಓದುವ ಮಂಟಪ ಸಾಹಿತ್ಯ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯವು ಕಾಲಮಾನಕ್ಕನುಸಾರ ಶಿಲ್ಪಕಲೆ, ನೃತ್ಯ, ನಾಟ್ಯ, ಚಿತ್ರಕಲೆ ಹಾಗೂ ಅಭಿನಯಗಳ ಮೂಲಕ ಬೆಳೆದು ಬಂದು ಕನ್ನಡದ ಕಂಪು ಹರಡಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ ಹಾನಗಲ್ಲ ಅವರು ಮಾತನಾಡಿ, ಮಾಣಿಕ ನೇಳಗಿಯವರ ಕಾವ್ಯ ಜನಪರವಾಗಿದ್ದು, ಜನರ ಏಳಿಗೆ, ಪ್ರಕೃತಿ ಸೌಂದರ್ಯ, ನಾಡಿನ ವೈಭವ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ ಎಂದ ಹೇಳಿದ ಅವರು, ಮಾಣಿಕ ನೇಳಗಿಯವರ 'ಧ್ವನಿಯಾಗಿ' ಕವನ ಸಂಕಲನ ವಿಮರ್ಶಿಸುತ್ತ, ಕವಿಯ ಕಾವ್ಯಗಳಲ್ಲಿ ಬಂಡಾಯದ ಧ್ವನಿ ಮೊಳಗಿದೆ. ಹೆಚ್ಚಿನ ರಚನೆಗಳು ನೇಳಗಿಯವರಿಂದ ಹೊರಬರಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ್ ಚನಶೆಟ್ಟಿ, ಸಾಹಿತಿ ಮಾಣಿಕ ನೇಳಗಿ, ಸುನಿತಾ ದಾಡಗೆ, ವಿದ್ಯಾವತಿ, ಬಲ್ಲೂರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಎಂ.ಮಚ್ಚೆ, ಜಗನ್ನಾಥ ಕಪಲಾಪೂರೆ, ಕಲ್ಯಾಣರಾವ್ ಚಳಕಾಪೂರೆ, ಯೋಗೇಂದ್ರ ಯದಲಾಪೂರೆ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ್ ಅತಿವಾಳೆ, ಶಿವಶಂಕರ ಟೋಕರೆ, ದೇವೇಂದ್ರ ಕರಂಜೆ, ವೀರಶಟ್ಟಿ ಚನಶೆಟ್ಟಿ, ಉಮೇಶ ಜಾಬಾ, ನಾರಾಯಣರಾವ್ ಭಂಗಿ, ಪುಂಡಲೀಕ ಇಟಗಂಪಳ್ಳಿ, ಪಾರ್ವತಿ ಸೋನಾರೆ ಹಾಗೂ ಶಂಭುಲಿಂಗ ವಾಲ್ದೊಡ್ಡಿ ಸೇರಿದಂತೆ ಇತರರು ಇದ್ದರು.