ಯುವಕರು ಮಾದಕ ವಸ್ತು ಸೇವೆನೆಯಿಂದ ದೂರವಿರುವ ಸಂಕಲ್ಪ ಮಾಡಬೇಕು : ತಹಶೀಲ್ದಾರ್ ಮಲಶೇಟ್ಟಿ ಚಿದ್ರಿ
ಬೀದರ್ : ಯುವಕರು ಮಾದಕ ವಸ್ತು ಸೇವೆನೆಯಿಂದ ದೂರವಿರುವ ಸಂಕಲ್ಪ ಮಾಡಬೇಕು ಎಂದು ಔರಾದ್ ನ ತಹಶೀಲ್ದಾರ್ ಮಲಶೇಟ್ಟಿ ಚಿದ್ರಿ ಹೇಳಿದರು.
ಔರಾದ್ ನಲ್ಲಿ ನಡೆದ ಬೆಂಗಳೂರಿನ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಔರಾದ್ ನ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ʼಮಧ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ವಿಚಾರ ಸಂಕೀರಣʼ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಪೀಳಿಗೆ ಧೂಮಪಾನ ಹಾಗೂ ಮಧ್ಯಪಾನದಿಂದ ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಿದೆ. ಇಂದಿನ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಶೆಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬರು ಮಾದಕ ವಸ್ತು ಸೇವೆನೆಯಿಂದ ದೂರ ಉಳಿಯುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಮುದೋಳ (ಬಿ) ಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಅನಿಕುಮಾರ್ ಗಡ್ಡೆ ಅವರು ಮಾತನಾಡಿ, ತಂಬಾಕು, ಗುಟ್ಕಾ, ಮಧ್ಯ ಸೇವನೆಯಿಂದ ಕ್ಯಾನ್ಸರ್, ಪಾರ್ಶವಾಯುವಂತಹ ಮಾರಕ ರೋಗಗಳು ಬರುತ್ತವೆ. 16 ರಿಂದ 23 ವರ್ಷದ ಒಳಗಿನ ಯುವಕರು ಮೊದಲಿಗೆ ಮೋಜಿಗಾಗಿ ತಂಬಾಕು, ಗುಟ್ಕಾ, ಹಾಗೂ ಮಧ್ಯ ಸೇವನೆ ಪ್ರರಂಭಿಸುತ್ತಾರೆ. ನಂತರ ದಿನಗಳಲ್ಲಿ ಅದು ಹವ್ಯಾಸವಾಗಿ ಬೆಳೆದು ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೇಶದಲ್ಲಿ ಪ್ರತಿ ದಿನ ಮಧ್ಯಪಾನ ಹಾಗೂ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ 2,500 ಜನ ಸಾವನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಕೂಡ ಅನೇಕ ಯುವಜನತೆ ಮಾರಕ ರೋಗಗಳಿಂದ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ, 15 ರಿಂದ 25 ವಯೋಮಾನದ ಇಂದಿನ ಯುವಕರು ಮಧ್ಯ ಸೇವನೆ, ಗುಟ್ಕಾ ಮತ್ತಿತರ ನಶೆ ಏರಿಸುವ ವಸ್ತುಗಳಿಂದ ದೂರ ಇರಬೇಕು. ಪ್ರತಿಯೊಂದು ಮಾದಕ ವಸ್ತುಗಳ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆಯಲಾಗಿದೆ. ಆದರೂ ಕೂಡ ಅದನ್ನು ಲೆಕ್ಕಿಸದೆ ಯುವಕರು ದುಶ್ಚಚಟಗಳಿಗೆ ಬಲಿಯಾಗುತ್ತಿದ್ದಾರೆ. ಅನಕ್ಷರಸ್ತರಿಗಿಂತ ಹೆಚ್ಚು ಅಕ್ಷರಸ್ಥರೆ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದು ಬೇಸರದ ಸಂಗತಿಯಾಗಿದೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಸುಳ್ಳೊಳಿ ಅವರು ಮಾತನಾಡಿ, ಸರ್ಕಾರದ ವತಿಯಿಂದ ಯುವಜನತೆಗಳಲ್ಲಿ ಜಾಗೃತಿ ಮೂಡಿಸಲು ಮಧ್ಯಪಾನ ಸಂಯಮ ಮಂಡಳಿಯವರಿಂದ ಇಂತಹ ವಿಚಾರ ಸಂಕೀರಣ ಕಾರ್ಯಕ್ರಮ ಏರ್ಪಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಎಲ್ಲ ರಿತಿಯ ದುಷ್ಚಟಗಳಿಂದ ದೂರ ಇದ್ದು, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ನಾಗಭೂಷಣ್ ಮಠ, ಶಿವಶಂಕರ್ ಟೋಕರೆ, ರೂರಲ್ ಐಟಿಐ ಕಾಲೇಜಿನ ಪ್ರಾಚಾರ್ಯ ರಾಜಕುಮಾರ್ ಮಾಳಗೆ, ಪಟ್ಟದೇವರು ಐಟಿಐ ಕಾಲೇಜಿನ ಪ್ರಾಚಾರ್ಯ ಸತೀಶ್ ಗಂದಿಗುಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕ ಅಧ್ಯಕ್ಷ ಪಂಡರಿ ಆಡೆ, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ಅಧಿಕಾರಿ ಬಾಬು ಪ್ರಭಾಜಿ, ಕೈಗಾರಿಕಾ ತರಬೇತಿ ಸಂಸ್ಥೆಯ ಅಧಿಕಾರಿ ಯುಸುಫ್ ಮಿಯಾ ಹಾಗೂ ವಾರ್ತಾ ಇಲಾಖೆಯ ವಿಜಯ ಕೃಷ್ಣ ಸೇರಿದಂತೆ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.