ಜಾತಿ ಜನಗಣತಿ: ಎಲ್ಲರ ಚಿತ್ತ ದಿಲ್ಲಿಯತ್ತ
ನಿಜವಾದ ಸಾಮಾಜಿಕ ನ್ಯಾಯ ಸಾಧಿಸಲು ಇದರ ಅವಶ್ಯಕತೆ ಖಂಡಿತ ಇದೆ. ನಿಜವಾದ ಅಂಕಿ ಅಂಶಗಳಿಲ್ಲದೆ ನಾವು ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಈ ಮಾಹಿತಿಯನ್ನು ಎಷ್ಟು ಜವಾಬ್ದಾರಿಯಿಂದ ಬಳಸುತ್ತೇವೆ ಎಂಬುದರ ಮೇಲೆ ಇಡೀ ದೇಶದ ಭವಿಷ್ಯ ನಿಂತಿದೆ. ಜಾತಿ ಸಮೀಕ್ಷೆಯು ದೇಶದ ಆಂತರಿಕ ಅಸಮಾನತೆಯನ್ನು ನಿರ್ಮೂಲ ಮಾಡಿ, ನಿಜವಾದ ಸಮಾನತೆ, ಸಮೃದ್ಧಿ ಮತ್ತು ಶ್ರೇಷ್ಠ ಭಾರತ ನಿರ್ಮಾಣಕ್ಕೆ ಉಪಯೋಗವಾಗಬೇಕಿದೆ.
PC: PTI
ಯಾರ ಊಹೆಗೂ ನಿಲುಕದಂಥ ಹಠಾತ್ ತೀರ್ಮಾನವೊಂದನ್ನು ಕೇಂದ್ರ ಸರಕಾರದ ಸಚಿವ ಸಂಪುಟ ಕೈಗೊಂಡು ಭಾರತೀಯರೆಲ್ಲರನ್ನು ಅಚ್ಚರಿಗೊಳಪಡಿಸಿದೆ. 2026ರಲ್ಲಿ ನಡೆಯುವ ಜನಗಣತಿಯ ಜೊತೆಗೆ ಜಾತಿಯನ್ನೂ ಗಣತಿ ಮಾಡುವುದಾಗಿ ಹೇಳಿಕೊಂಡಿರುವುದು, ದೇಶದ ಪ್ರತಿಯೊಬ್ಬ ಪ್ರಜೆಗೆ, ಅದರಲ್ಲೂ ಇತರ ಹಿಂದುಳಿದ ವರ್ಗಗಳಿಗೆ ಸಂತಸ ತಂದಿದೆ. ಕಳೆದ ಕೆಲವಾರು ತಿಂಗಳ ಹಿಂದೆ, ಜಾತಿ ಗಣತಿ ಮಾಡುವುದಿಲ್ಲ, ಅದರಿಂದ ಜಾತೀಯತೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿತ್ತು. ಜಾತಿ ಗಣತಿ ನಡೆಸುವುದರಿಂದ ಜಾತಿ ಸಂಘರ್ಷಗಳು ಹೆಚ್ಚಾಗಿ ಸಮಾಜ ವಿಘಟನೆಯಾಗುತ್ತದೆ, ಜಾತಿಗಣತಿ ಎನ್ನುವುದು ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ ಎಂದೆಲ್ಲ ಅಧಿಕಾರಕ್ಕೆ ಬಂದ ಲಾಗಾಯಿತಿನಿಂದಲೂ ಹೇಳಿಕೊಂಡು ಬರುತ್ತಿದ್ದ ಬಿಜೆಪಿಯ ತೀರ್ಮಾನದ ಹಿಂದೆ ರಾಜಕೀಯ ಘಮಲು ಇದೆ ಎಂಬುದಾದರೂ, ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅಸಮಾನತೆ-ತಾರತಮ್ಯ ಇವುಗಳನ್ನು ಹೋಗಲಾಡಿಸುವ ದಿಸೆಯಲ್ಲಾದರೂ ಜಾತಿ ಗಣತಿ ಇಂದಲ್ಲ ನಾಳೆಯಾದರೂ ಮಾಡಲೇಬೇಕಾದ ಅನಿವಾರ್ಯತೆಯಂತೂ ಇತ್ತು. ಎಂಥಾದರೂ ಇರಲಿ ಕೇಂದ್ರದ ನಡೆ ಸ್ವಾಗತಾರ್ಹ. ಸಂದರ್ಭಕ್ಕನುಗುಣವಾಗಿ ಒಂದೊಂದೇ ಪ್ರಬಲ ಅಸ್ತ್ರ ಪ್ರಯೋಗಿಸುವ ರಾಜಕೀಯ ಚತುರತೆ ಬಿಜೆಪಿಯವರದು. ಈ ನಿರ್ಣಯ ರಾಜಕೀಯ ಲಾಭಕ್ಕಾಗಿಯೋ ಅಥವಾ ಸಾಮಾಜಿಕ ನ್ಯಾಯದ ಹಾದಿಯತ್ತ ಹೆಜ್ಜೆಯೋ, ಕಾಲವೇ ಉತ್ತರಿಸುವುದು.
ಜಾತಿಯನ್ನೂ ಒಳಗೊಂಡ ಜನಗಣತಿ ಕೊನೆಗೊಂಡದ್ದು ವಸಾಹತು ಕಾಲಘಟ್ಟದ 1931ರಲ್ಲಿ. ಜಾತಿ-ಜನಗಣತಿ (caste -based census)ಯನ್ನು ಪ್ರಾರಂಭಿಸಿದ ವರ್ಷ 1872. ಆದರೆ ವೈಜ್ಞಾನಿಕ ಮತ್ತು ವ್ಯಾಪಕ ನೆಲೆಗಟ್ಟಿನ ಮೇಲೆ ರಾಷ್ಟ್ರವ್ಯಾಪಿ ಜಾತಿ ಜನಗಣತಿಯನ್ನು 1881ರಿಂದ ಪ್ರಾರಂಭಿಸಲಾಯಿತು. ಬ್ರಿಟಿಷರು ಜಾತಿ ಜನಗಣತಿಯನ್ನು ಪ್ರಾರಂಭಿಸಲು ಎರಡು ಆಯಾಮಗಳಿವೆ ಎಂದು ಹೇಳಲಾಗಿದೆ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ದೈನಂದಿನ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಮನಗಂಡಿದ್ದ ಬ್ರಿಟಿಷರು ಜನಗಣತಿ ಜೊತೆಯಲ್ಲಿಯೇ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಇತ್ಯಾದಿ ವಿಷಯಗಳ ದತ್ತಾಂಶ ಸಂಗ್ರಹಣೆ ಅಗತ್ಯ ಎಂಬ ಪರಿಭಾವನೆ ಒಂದಾದರೆ, ಮತ್ತೊಂದು ಭಾರತ ವರ್ಣಾಶ್ರಮದ ಕಾರಣ, ಪರಸ್ಪರ ವೈರುಧ್ಯ ದಿಕ್ಕಿನಲ್ಲಿರುವ ಜಾತಿಗಳಿಂದ ಕೂಡಿದ ದೇಶ ಎಂಬುದನ್ನು ಅರಿತಿದ್ದ ಬ್ರಿಟಿಷರು ‘ಒಡೆದಾಳುವ ನೀತಿ’ಯ ಪ್ರಮುಖ ಮನಸ್ಥಿತಿಯನ್ನು ಹೊಂದಿದ್ದವರು. ಈ ಜಾತಿ ಜನಗಣತಿಯಲ್ಲಿ ರಾಷ್ಟ್ರದಲ್ಲಿನ ಇಡೀ ಜನಸಂಖ್ಯೆಯ ಸಮಗ್ರ ವಿವರಗಳನ್ನು ಧರ್ಮವಾರು ಮತ್ತು ಭಾಷಾವಾರು ಮಾತ್ರವಲ್ಲದೆ ಜಾತಿವಾರು ಮತ್ತು ಬುಡಕಟ್ಟುವಾರು ಸಂಗ್ರಹಿಸಲಾಗಿತ್ತು ಎಂಬುದು ಮಹತ್ವ ಪಡೆದುಕೊಳ್ಳುವುದು.
ಬ್ರಿಟಿಷ್ ಆಡಳಿತ ಮತ್ತು ಜಾತಿ ಜನಗಣತಿ
ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಜಾತಿಯು ಭಾರತೀಯ ಸಮಾಜದ ಮಹತ್ವದ ಅಂಶವಾಗಿತ್ತು. ಬ್ರಿಟಿಷ್ ಆಡಳಿತವೂ ಇದನ್ನು ಗುರುತಿಸಿ ಜಾತಿ ಗಣತಿ ಯೋಜನೆಗೆ ಸೇರಿಸಿಕೊಂಡಿತು.
1931ರ ಜನಗಣತಿ
1931ರ ಜನಗಣತಿಯು ಗಮನಾರ್ಹ ಘಟನೆಯಾಗಿತ್ತು, ಏಕೆಂದರೆ ಇದು ಬ್ರಿಟಿಷ್ ಆಳ್ವಿಕೆಯಲ್ಲಿ ಜಾತಿ ಆಧಾರಿತ ದತ್ತಾಂಶವನ್ನು ಒಳಗೊಂಡ ಕೊನೆಯ ಜನಗಣತಿಯಾಗಿತ್ತು. ಈ ಜನಗಣತಿಯು ವಿವಿಧ ಗುಂಪುಗಳಲ್ಲಿ ಜನಸಂಖ್ಯಾ ವರ್ಗೀಕರಣ ಕುರಿತು ಅಮೂಲ್ಯ ಮಾಹಿತಿಯನ್ನು ಒದಗಿಸಿತ್ತು.
1935ರ ಭಾರತ ಸರಕಾರ ಕಾಯ್ದೆ
1931ರ ಜನಗಣತಿ ಮತ್ತು ಹಟ್ಟನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಬ್ರಿಟಿಷ್ ಸರಕಾರವು ಕಾಯ್ದೆಯಡಿಯಲ್ಲಿ ಕೆಲವು ಜಾತಿಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಿತು. ಇವು ಮೂಲತಃ ಪರಿಶಿಷ್ಟ ಜಾತಿ ಮತ್ತು ‘ಅಸ್ಪಶ್ಯರು’ ಎಂದು ಪರಿಗಣಿಸಲಾದ ಇತರ ಗುಂಪುಗಳಾಗಿದ್ದವು.
1941ರಲ್ಲಿಯೂ ಎಂದಿನಂತೆ ಜನಗಣತಿ ನಡೆಯಿತಾದರೂ, ಎರಡನೇ ವಿಶ್ವ ಮಹಾಯುದ್ಧದ ಕಾರಣ, ವಸಾಹತು ಸರಕಾರಕ್ಕೆ ಆರ್ಥಿಕ ಮುಗ್ಗಟ್ಟಿನಿಂದ ಜನಗಣತಿ ದತ್ತಾಂಶವನ್ನು ವಿಶ್ಲೇಷಣೆ ಮಾಡಿ ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ.
ಸ್ವಾತಂತ್ರ್ಯದ ನಂತರ
ಸ್ವಾತಂತ್ರ್ಯದ ನಂತರ ಭಾರತ ಸರಕಾರವು ಜನಗಣತಿಯಲ್ಲಿ ಜಾತಿ ದತ್ತಾಂಶವನ್ನು ಸೇರಿಸದಿರಲು ಹಲವಾರು ಕಾರಣಗಳಿವೆ. ಜನಗಣತಿ ನಡೆಸುವ ಕಾರಣದಿಂದ 1948ರಲ್ಲಿ ಕಾಯ್ದೆಯೊಂದನ್ನು ಹೊರತಂದಿತು ಕೂಡ. ಆದರೆ ಕಾಯ್ದೆಯನ್ನು ತಿದ್ದುಪಡಿಗೆ ಒಳಪಡಿಸಬೇಕು. ತಿದ್ದುಪಡಿ ಮಾಡಲು ಮುಂದಿನ ಅಧಿವೇಶನದವರೆಗೂ ಕಾಯಲೇಬೇಕು ಅಥವಾ ವಿಶೇಷ ಅಧಿವೇಶನ ಕರೆದು ತಿದ್ದುಪಡಿ ಮಾಡುವ ಅವಕಾಶವಿದೆ. ಈ ವಿಷಯವನ್ನು ವಿರೋಧ ಪಕ್ಷದವರು ಪ್ರಸ್ತಾವಿಸುತ್ತಲೇ ಇಲ್ಲ. ಬ್ರಿಟಿಷ್ ವಸಾಹತುಶಾಹಿ ಕಾಲದ ಪರಂಪರೆಯಾಗಿದ್ದ ಜಾತಿ ಆಧಾರಿತ ಶ್ರೇಣಿಯನ್ನು ಮೀರಿ ಹೋಗುವ ಬಯಕೆ ಮತ್ತು ಅಂತಹ ದತ್ತಾಂಶದ ದುರುಪಯೋಗದ ಸಾಧ್ಯತೆಯು ಇದಕ್ಕೆ ಕಾರಣಗಳಾಗಿವೆ ಎಂಬ ವಾದವು ಒಂದೆಡೆಯಾದರೆ, ಮೇಲ್ಜಾತಿ-ವರ್ಗಗಳ ಪ್ರಬಲ ವಿರೋಧವೂ ಮತ್ತೊಂದು ಕಾರಣ ಎಂದು ಹೇಳುವುದಿದೆ.
ಸ್ವಾತಂತ್ರ್ಯ ಪೂರ್ವದ ಕಾಲಘಟ್ಟ 1931ರಲ್ಲಿ ನಡೆದ ಜಾತಿ ಜನಗಣತಿಯ ದತ್ತಾಂಶಗಳನ್ನು ಹಿಂದುಳಿದ ವರ್ಗಗಳನ್ನು ಗುರುತಿಸಲು ಸಾಮಾನ್ಯವಾಗಿ ಎಲ್ಲಾ ಹಿಂದುಳಿದ ವರ್ಗಗಳ ಆಯೋಗಗಳು ಬಳಸಿಕೊಂಡಿವೆ. ಅದಾದ ನಂತರ ಕೇಂದ್ರ ಸರಕಾರ ಈವರೆಗೂ ಜಾತಿ ದತ್ತಾಂಶವನ್ನು ಸೇರಿಸಿ ಜನಗಣತಿಯನ್ನು ಮಾಡಿರುವುದಿಲ್ಲ. ಈಗ ಇತಿಹಾಸ ಮರುಕಳಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ನಿರ್ಧಾರದಿಂದ ಭಾರತ ತನ್ನ ಸಾಮಾಜಿಕ ಶ್ರೇಣೀಕರಣದ ನಿಜವಾದ ಚಿತ್ರಣವನ್ನು ಅರಿತುಕೊಳ್ಳಬಹುದಾದ ಸಮಯ ಬಂದಿದೆ. ಜೊತೆಗೆ ಹೆಚ್ಚಿನ ಮತದಾರರ ಪ್ರಾಬಲ್ಯವಿರುವ ಇತರ ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ದಾಖಲೆಗಳಿಂದ ರುಜುವಾತು ಪಡಿಸುವುದು ಕೆಲವು ರಾಜಕೀಯ ಪಕ್ಷಗಳಿಗೆ ಚುನಾವಣೆಗೋಸ್ಕರ ಬಹುಮುಖ್ಯವಾದ ಒಂದು ರಾಜಕೀಯ ತಂತ್ರ ಕೂಡ ಆಗಿದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶಾದ್ಯಂತ ಕೊನೆಯ ಬಾರಿಗೆ ಜಾತಿಗಣತಿಯನ್ನು 2011ರಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ (ಎಸ್‌ಇಸಿಸಿ) ಅಡಿಯಲ್ಲಿ ನಡೆಸಲಾಯಿತು. ಕುಟುಂಬಗಳು ಮತ್ತು ವ್ಯಕ್ತಿಗಳ ಸಾಮಾಜಿಕ ಆರ್ಥಿಕ ಸ್ಥಿತಿಯ ಬಗ್ಗೆ ಅವರ ಜಾತಿಯು ಸೇರಿದಂತೆ ವಿವರವಾದ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನ ಇದಾಗಿತ್ತು. ಮಾಹಿತಿ ಅಪೂರ್ಣ ಮತ್ತು ವೈಜ್ಞಾನಿಕವಾಗಿಲ್ಲ ಎಂಬ ಕಾರಣ ನೀಡಿ ಅಂಕಿ ಅಂಶಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿತ್ತು. ಈ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿಯನ್ನು ನಡೆಸಲು, ಒತ್ತಾಯ ಬಂದದ್ದು ಹಿಂದುಳಿದ ವರ್ಗಗಳ ಮುಖಂಡರಿಂದ. 2011ರ ಜನಗಣತಿಯ ಭಾಗವಾಗಿ ಜಾತಿಗಣತಿಯನ್ನು ನಡೆಸಬೇಕು ಎಂದು ಸಂಸತ್ತಿನ ಎರಡೂ ಸದನಗಳಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಅದರಂತೆ 2011ರ ಜನಗಣತಿಯೊಂದಿಗೆ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯನ್ನು ನಡೆಸಲಾಗಿತ್ತು.
ಜಾತಿ ಜನಗಣತಿಯ ಪರಿಣಾಮಗಳು ಏನು?
ವಾಸ್ತವಿಕ ಅಂಕಿ ಅಂಶಗಳು ಲಭ್ಯವಾಗುವುದು ಇದುವರೆಗೆ ಇದ್ದ ಅನೌಪಚಾರಿಕ ಅಂದಾಜುಗಳನ್ನು ಬದಿಗೊತ್ತಿ ನಿಖರವಾದ ಅಂಕಿ ಅಂಶಗಳ ಆಧಾರದ ಮೇಲೆ ನೀತಿ ನಿರೂಪಣೆಗಳನ್ನು ರೂಪಿಸಲು ಅನುಕೂಲವಾಗುವುದು. ರಾಜಕೀಯ ಪಕ್ಷಗಳು ಈ ದತ್ತಾಂಶಗಳನ್ನು ತಮ್ಮ ಮತ ಬ್ಯಾಂಕ್ ದೃಷ್ಟಿಯಿಂದ ಉಪಯೋಗಿಸಲು ಅನುಕೂಲವಾಗಬಹುದು. ಸಂವಿಧಾನದಲ್ಲಿ ಕಲ್ಪಿಸಿರುವಂತೆ ಪರಿಶಿಷ್ಟ ಜಾತಿ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ನೀಡಲ್ಪಟ್ಟ ಮೀಸಲಾತಿಯನ್ನು ಇನ್ನಷ್ಟು ಸಮರ್ಪಕವಾಗಿ ಹಂಚಬೇಕಾದ ಅಗತ್ಯ ಇರುವುದರಿಂದ ಜಾತಿ ಸಮೀಕ್ಷೆಯಿಂದ ನಿಖರವಾದ ಫಲಿತಾಂಶ ಬರುತ್ತದೆ. ಸರಿಯಾದ ಜಾತಿ ಸಮೀಕ್ಷೆಯು ಯೋಜನೆಗಳ ಸಮರ್ಥ ಜಾರಿಗೆ ಸಹಾಯವಾಗುತ್ತದೆ. ಹಿಂದುಳಿದ ಜಾತಿಗಳ ಸ್ಥಿತಿಗತಿಗಳು ಅವುಗಳ ಬೆಳವಣಿಗೆಗೆ ದಾರಿಯಾಗುತ್ತವೆ.
ನಿಜವಾದ ಸಾಮಾಜಿಕ ನ್ಯಾಯ ಸಾಧಿಸಲು ಇದರ ಅವಶ್ಯಕತೆ ಖಂಡಿತ ಇದೆ. ನಿಜವಾದ ಅಂಕಿ ಅಂಶಗಳಿಲ್ಲದೆ ನಾವು ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಈ ಮಾಹಿತಿಯನ್ನು ಎಷ್ಟು ಜವಾಬ್ದಾರಿಯಿಂದ ಬಳಸುತ್ತೇವೆ ಎಂಬುದರ ಮೇಲೆ ಇಡೀ ದೇಶದ ಭವಿಷ್ಯ ನಿಂತಿದೆ. ಜಾತಿ ಸಮೀಕ್ಷೆಯು ದೇಶದ ಆಂತರಿಕ ಅಸಮಾನತೆಯನ್ನು ನಿರ್ಮೂಲ ಮಾಡಿ, ನಿಜವಾದ ಸಮಾನತೆ, ಸಮೃದ್ಧಿ ಮತ್ತು ಶ್ರೇಷ್ಠ ಭಾರತ ನಿರ್ಮಾಣಕ್ಕೆ ಉಪಯೋಗವಾಗಬೇಕಿದೆ.
ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ಅದರ ಲಾಭ ಪಡೆಯಲು ಪರಸ್ಪರ ಸೆಣಸುತ್ತಿವೆ. ಕಾರಣವೆಂದರೆ ಆಡಳಿತ ಪಕ್ಷದ ತಲೆಯಾಳುಗಳೇ ಅಲ್ಲದೆ, ಅಧಿಕಾರಿಗಳಿಂದಲೂ ಕೂಡ, ಜಾತಿ ಗಣತಿ ಆಡಳಿತಾತ್ಮಕ ದೃಷ್ಟಿಯಿಂದ ಸಾಧ್ಯವಿಲ್ಲ ಎಂದು ಹೇಳಿಸಲಾಗಿತ್ತು. ಇದನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡ ವಿರೋಧ ಪಕ್ಷಗಳು ಅದರಲ್ಲೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೋದಲ್ಲಿ ಬಂದಲ್ಲಿ ಜಾತಿ ಗಣತಿಯನ್ನು ಕೂಡಾ ಜನಗಣತಿಯೊಡನೆ ಮಾಡಿ ಎಂಬುದನ್ನು ಹೇಳುತ್ತಾ ಬರುತ್ತಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ವಿರೋಧ ಪಕ್ಷಗಳು ಈಗ ತಮ್ಮ ಪ್ರಬಲ ಒತ್ತಾಯವೇ ಕೇಂದ್ರ ಸರಕಾರ ನಿರ್ಣಯ ಕೈಗೊಳ್ಳಲು ಕಾರಣ ಎಂಬುದನ್ನು ಪದೇ ಪದೇ ಹೇಳುತ್ತಿವೆ. ನಮ್ಮ ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷ ಏನು ನಿರ್ಧರಿಸುತ್ತದೆಯೋ ಅದೇ ಜನಸಾಮಾನ್ಯರಿಗೆ ಮುಖ್ಯವಾಗುತ್ತದೆ. ಹೀಗಾಗಿ, ಲಾಭ ಪಡೆಯಲು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಪರಸ್ಪರ ಕಿತ್ತಾಡುವುದು ತರವಲ್ಲ. ಏನೇ ಆಗಲಿ ತೀರ್ಮಾನ ಆಗಿದೆ. ವಿರೋಧ ಪಕ್ಷಗಳೂ ಕೂಡ ಸ್ವಾಗತಿಸಿವೆ.
ಜನಗಣತಿ ಕಾರ್ಯಕ್ರಮ ಪ್ರತೀ 10 ವರ್ಷಗಳಿಗೊಮ್ಮೆ ನಡೆಯುವ ರಾಷ್ಟ್ರೀಯ ಬೃಹತ್ ಕಾರ್ಯಕ್ರಮ. ಇದನ್ನು ಕೇವಲ ತಿಂಗಳೊಪ್ಪತ್ತಿನಲ್ಲಿ ಮಾಡಿ ಮುಗಿಸಲು ಸಾಧ್ಯವಿಲ್ಲದ ಮಾತು. ಇದನ್ನು ವಿರೋಧ ಪಕ್ಷದವರು ಅರಿಯಬೇಕಿದೆ. ಜಾತಿಯನ್ನು ಒಳಗೊಳ್ಳದ ಬರೀ ಜನಗಣತಿಯನ್ನು ಮಾಡಲು ಹಲವಾರು ತಿಂಗಳುಗಳೇ ಬೇಕಾಗುತ್ತಿತ್ತು. ಅಷ್ಟೇ ಏಕೆ ವರ್ಷವಾದರೂ ಮುಗಿಯುತ್ತಿರಲಿಲ್ಲ. ಗಣತಿ ಕಾರ್ಯ ಮುಗಿದರೂ ವಿಶ್ಲೇಷಿತ ಫಲಿತಾಂಶ ದೊರಕಲು ಎರಡು ವರ್ಷಗಳ ಮೇಲಾಗುತ್ತಿತ್ತು. ಅದೊಂದು ಅನೂಚಾನವಾಗಿ ನಡೆದು ಬಂದ ವೈಜ್ಞಾನಿಕ ಪದ್ಧತಿಯಾಗಿದೆ. ಗಣತಿಗೆ ನಿಗದಿತ ಕಾಲವಿದ್ದರೂ, ಅದು ಒಂದು ವರ್ಷಕ್ಕಿಂತ ಕಡಿಮೆಯಂತೂ ಖಂಡಿತ ಇರುವುದಿಲ್ಲ. ಪ್ರಸ್ತುತ ಜಾತಿಯು ಒಳಗೊಂಡಿರುವುದರಿಂದ ಕಾಲವನ್ನು ಹೊಸದಾಗಿ ಅಂದಾಜಿಸಬೇಕಿದೆ. ಎಂದಿನಂತೆ ಶಾಲಾ ಶಿಕ್ಷಕರೇ ಗಣತಿದಾರರು. ರಜಾದಿನಗಳನ್ನು ಹೊರತುಪಡಿಸಿ ಬೇರೆ ಶಾಲಾ ದಿನಗಳಲ್ಲಿ ಅವರ ಸೇವೆಯನ್ನು ಯಾವುದಕ್ಕೂ ಬಳಸುವ ಹಾಗಿಲ್ಲ, ಅದಕ್ಕೆ ಕಾಯ್ದೆಯ ಸಂರಕ್ಷಣೆ ಇದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ಇದಕ್ಕೆ ಮುಖ್ಯಸ್ಥರು. ಜನಗಣತಿ ಸಂದರ್ಭದಲ್ಲಿ ಪ್ರತೀ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ರಾಜ್ಯ ಜನಗಣತಿ ಆಯುಕ್ತರನ್ನು ನೇಮಿಸಲಾಗುವುದು. ಜನಗಣತಿ ಕಾರ್ಯವನ್ನು ಎಂದಿನಂತೆ ಶಾಲಾ ಶಿಕ್ಷಕರೇ ಗಣತಿದಾರರಾಗಿ ಕಾರ್ಯನಿರ್ವಹಿಸುವರು. ಇವರ ಉಸ್ತುವಾರಿಯನ್ನು ನಿಗದಿತ ಅಧಿಕಾರಿಗಳು ವಹಿಸಿಕೊಳ್ಳುವರು. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಯೂ, ಉಪವಿಭಾಗದ ಮಟ್ಟದಲ್ಲಿ ಉಪ ವಿಭಾಗಾಧಿಕಾರಿಯೂ ಮತ್ತು ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ನಿಗದಿತ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುವರು. ಹಾಕಿಕೊಟ್ಟ ವೇಳಾಪಟ್ಟಿಯಂತೆ ಗಣತಿ ಕಾರ್ಯ ಜರುಗುವುದು.
2026ರಲ್ಲಿ ಜಾತಿಗಣತಿ ಮಾಡಲು ಯಾವ ಮಾರ್ಗ ಅನುಸರಿಸುತ್ತಾರೆ ಎಂಬುದನ್ನು ಭಾರತದ ಜನಗಣತಿ ಆಯುಕ್ತರು ತೀರ್ಮಾನಿಸುವರು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಜಾತಿ ಉಪಜಾತಿಗಳನ್ನು ಮೊದಲೇ ಪಟ್ಟಿ ಮಾಡುವರೋ ಅಥವಾ ಗಣತಿದಾರರು ಮನೆಮನೆಗೆ ಹೋದಾಗ ವಿಚಾರಿಸಿ ಬರೆದುಕೊಳ್ಳುವರೋ ಸದ್ಯಕ್ಕಂತೂ ತಿಳಿಯದು. ಕರ್ನಾಟಕದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಿದ ಸಂದರ್ಭದಲ್ಲಿ ಮೊದಲೇ ಜಾತಿ-ಉಪಜಾತಿಗಳನ್ನು ಗುರುತಿಸಿ ಸಂಕೇತಾಕ್ಷರಗಳನ್ನು ಕೊಡಲಾಗಿತ್ತು. ಆದರೆ ಕೇಂದ್ರ ಸರಕಾರ ಈ ವಿಷಯದಲ್ಲಿ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಮುಂದಷ್ಟೇ ತಿಳಿಯಬೇಕಾಗಿದೆ. ಮೇಲೆ ಹೇಳಿದಂತೆ ಮೊದಲು 1948ರ ಜನಗಣತಿ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರವಷ್ಟೇ ಮಿಕ್ಕೆಲ್ಲ ವಿಷಯಗಳು ಗಣನೆಗೆ ಬರುತ್ತವೆ. ಕೇಂದ್ರ ಸರಕಾರದ ಸಾಚಾತನ ನಮಗೆ ತಿಳಿಯಬೇಕೆಂದರೆ ಆತನಕ ನಾವು ಕಾಯುವುದೊಂದೇ ಬಾಕಿ.