ಚಾಮರಾಜನಗರ: ಅಡುಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ; ಶಾಲೆ ತೊರೆದ ವಿದ್ಯಾರ್ಥಿಗಳು
ಚಾಮರಾಜನಗರ: ಸರ್ಕಾರಿ ಶಾಲೆಯಲ್ಲಿ ಮುಖ್ಯ ಅಡುಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕಕ್ಕೆ ಅಸಮಾಧಾನ ವ್ಯಕ್ತವಾಗಿದ್ದು, ಶಾಲೆಗೆ ದಾಖಲಾಗಿದ್ದ ಮಕ್ಕಳು ಬೇರೆ ಕಡೆ ವ್ಯಾಸಾಂಗ ಮಾಡಲು ವರ್ಗಾವಣೆ ಪತ್ರ ಪಡೆದು ತೆರಳುತ್ತಿರುವ ಘಟನೆ ಆಲೂರು ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
2024-25 ನೇ ಸಾಲಿನಲ್ಲಿ ಶಾಲೆಯಲ್ಲಿ 22 ವಿದ್ಯಾರ್ಥಿಗಳಿದ್ದರು. ಈಗಾಗಲೇ 12 ಮಕ್ಕಳು ಟಿಸಿ ಪಡೆದಿದ್ದಾರೆ. ಉಳಿದವರಿಂದಲೂ ವರ್ಗಾವಣೆ ಪತ್ರ ಪಡೆಯಲು ಅರ್ಜಿ ಸಲ್ಲಿಕೆಯಾಗಿದೆ. ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪತ್ರ ಪಡೆದು ಬೇರೆ ಬೇರೆ ಶಾಲೆಗಳಿಗೆ ಸೇರಿಸುತ್ತಿರುವ ಪರಿಣಾಮ ಶಾಲೆ ಮುಚ್ಚುವ ಹಂತಕ್ಕೆ ತಲುಪಿದೆ.
ಶಾಲೆಯಲ್ಲಿನ ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿ ದಲಿತ ಮಹಿಳೆ ಎಂಬ ಕಾರಣಕ್ಕೆ ಮಕ್ಕಳ ವರ್ಗಾವಣೆ ಪತ್ರ ಪಡೆದು ಬೇರೆಡೆ ಸೇರಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಮಕ್ಕಳ ಪೋಷಕರು ನಿರಾಕರಿಸಿದ್ದಾರೆ. ಈ ಶಾಲೆಯಲ್ಲೀಗ ಕೇವಲ ಒಬ್ಬ ವಿದ್ಯಾರ್ಥಿ, ಇಬ್ಬರು ಶಿಕ್ಷಕರು ಇದ್ದಾರೆ. ಆ ಒಬ್ಬ ವಿದ್ಯಾರ್ಥಿಯನ್ನೂ ಬೇರೆಡೆ ಸೇರಿಸಲು ಪೋಷಕರು ವರ್ಗಾವಣೆ ಪತ್ರ ಕೇಳಿದ್ದಾರೆಎಂದು ತಿಳಿದು ಬಂದಿದೆ.
ಹಿಂದೆ ಶಾಲೆಯಲ್ಲಿನ ಶಿಕ್ಷಕರು ಸರಿಯಾಗಿ ಪಾಠ ಪ್ರವಚನ ಮಾಡುತ್ತಿಲ್ಲ ಎಂದು ಪೋಷಕರು ಪ್ರತಿಭಟಿಸಿದ್ದರು. ಆ ವೇಳೆ ಶಿಕ್ಷಣ ಇಲಾಖೆಯು ಶಿಕ್ಷಕರನ್ನು ಬೇರೆಡೆಗೆ ಸ್ಥಳಾಂತರಿಸಿತ್ತು. ಇದೀಗ ಶಾಲೆಯಲ್ಲಿ ಮತ್ತೊಂದು ಸಮಸ್ಯೆ ಉದ್ಭವವಾಗಿದ್ದು, ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಚಾಮರಾಜನಗರ ತಾಲ್ಲೂಕಿನ ಹೊಮ್ಮ ಸರ್ಕಾರಿ ಶಾಲೆಯಲ್ಲಿ ಕಳೆದ ವರ್ಷ 22 ಮಕ್ಕಳಿದ್ದರು. ಈಗ ಎಸ್ಎಟಿಎಸ್ ನಲ್ಲಿ ಮಕ್ಕಳ ಸಂಖ್ಯೆ ಐದಕ್ಕೆ ಇಳಿದಿದೆ. ಗ್ರಾಮಸ್ಥರನ್ನು ಕೇಳಿದರೆ ನಿಮ್ಮ ಶಿಕ್ಷಕರು ನಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ. ಹೀಗಾಗಿ ಟಿಸಿ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳುತ್ತಾರೆ. ಇದಲ್ಲದೇ ಆಂತರಿಕವಾಗಿ ಬೇರೆ ಬೇರೆ ಕಾರಣಗಳಿವೆ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಪೊಲೀಸರು, ಬಿಇಒ, ಬಿಆರ್‌ಸಿ ಹೋಗಿದ್ದಾರೆ. ಪಾಲಕರ ಸಭೆ ಬಳಿಕ ಮಾಹಿತಿ ತಿಳಿದು ಕ್ರಮ ವಹಿಸಲಾಗುವುದು. ಜಾತಿ ವಿಚಾರ ಇದ್ದರೆ ಇದನ್ನು ನಾವು ಸಹಿಸುವುದೂ ಇಲ್ಲ, ಇದಕ್ಕೆ ಅವಕಾಶವನ್ನೂ ಕೊಡುವುದಿಲ್ಲ.
ರಾಮಚಂದ್ರರಾಜೇ ಅರಸ್, ಡಿಡಿಪಿಐ, ಚಾಮರಾಜನಗರ