×
Ad

ಚಾಮರಾಜನಗರ | ಸುಳ್ವಾಡಿ ವಿಷ ಪ್ರಸಾದ ಪ್ರಕರಣ : ಇಮ್ಮಡಿ ಮಹದೇವಸ್ವಾಮಿಗೆ ಮಹದೇಶ್ವರ ಬೆಟ್ಟ ಪ್ರವೇಶಕ್ಕೆ ನಿರ್ಬಂಧ

Update: 2026-01-29 12:29 IST

ಚಾಮರಾಜನಗರ: ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಮಿಶ್ರಿತ ಪ್ರಸಾದ ವಿತರಣೆ ಮಾಡಿ 17 ಮಂದಿ ದುರ್ಮರಣಕ್ಕೆ ಕಾರಣರಾದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರಿಗೆ, ಇಂದಿನಿಂದ ಮುಂದಿನ ಆದೇಶದ ತನಕ ಮಲೆ ಮಹದೇಶ್ವರ ಬೆಟ್ಟ ಪ್ರವೇಶಕ್ಕೆ ಕೊಳ್ಳೇಗಾಲ ತಹಸೀಲ್ದಾರ್ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ.

ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರು ಚಿಕಿತ್ಸೆ ನೆಪದಲ್ಲಿ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದು ಒಂದು ವರ್ಷದ ಅವಧಿಗೆ ಜೈಲಿನಿಂದ ಬಿಡುಗಡೆಗೊಂಡಿದ್ದು, ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಕೊಳ್ಳೇಗಾಲ ತಹಸೀಲ್ದಾರ್ ಚೈತ್ರ ಅವರು ಪೆರೋಲ್ ಮೂಲಕ ಬಿಡುಗಡೆಯಾಗಿರುವ ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಜನವರಿ 29ರಿಂದ ಮುಂದಿನ ಆದೇಶದ ತನಕ ಮಲೆ ಮಹದೇಶ್ವರ ಬೆಟ್ಟ ಪ್ರವೇಶಿಸದಂತೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಈ ಮಧ್ಯೆ, ಇಮ್ಮಡಿ ಮಹದೇವಸ್ವಾಮಿ ಅವರು ಬುಧವಾರ ಸಂಜೆಯಿಂದ ಗುರುವಾರ ಬೆಳಿಗ್ಗೆ ತನಕ ಹನೂರು ಪಟ್ಟಣದ ಸಮೀಪದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು ಎಂಬುದು ಬೆಳಕಿಗೆ ಬಂದಿದೆ.

ಈ ವಿಷಯ ಹನೂರು ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಇಮ್ಮಡಿ ಮಹದೇವಸ್ವಾಮಿ ಅವರ ಚಲನ–ವಲನಗಳ ಮೇಲೆ ನಿಗಾ ವಹಿಸಿದ್ದರು. ಬಳಿಕ ಗುರುವಾರ ಬೆಳಿಗ್ಗೆ ಕೊಳ್ಳೇಗಾಲ ತಹಸೀಲ್ದಾರ್ ಅವರಿಂದ ಮಹದೇಶ್ವರ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಆದೇಶದ ಪ್ರತಿ ತಲುಪುತ್ತಿದ್ದಂತೆ, ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News