ಚಾಮರಾಜನಗರ: ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಭಾವಚಿತ್ರವಿರುವ ಪ್ಲೆಕ್ಸ್ ಹರಿದು, ಬುದ್ದನ ವಿಗ್ರಹ ಧ್ವಂಸಗೊಳಿಸಿದ ಕಿಡಿಗೇಡಿಗಳು
ಚಾಮರಾಜನಗರ: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇರುವ ಪ್ಲೆಕ್ಸ್ ಹಾಗೂ ಬೋರ್ಡ್ ಅನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಲ್ಲದೆ, ಬುದ್ದನ ವಿಗ್ರಹವನ್ನು ಧ್ವಂಸಗೊಳಿಸಿದ ಘಟನೆ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಪರಿಶಿಷ್ಟ ಜನಾಂಗದ ಹಳೇ ಬಡಾವಣೆಯಲ್ಲಿ ಅಂಬೇಡ್ಕರ್, ಬೋರ್ಡ್ ಹಾಗೂ ಹೊಸ ಬಡಾವಣೆ ಬಳಿ ಅಂಬೇಡ್ಕರ್ ಭಾವಚಿತ್ರ ಇರುವ ಪ್ಲೆಕ್ಸ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಅಲ್ಲದೇ ಹೊಸ ಬಡಾವಣೆಯಲ್ಲಿರುವ ಬುದ್ಧನ ಗುಡಿಯೊಳಗಿದ್ದ ಬುದ್ಧನ ವಿಗ್ರಹವನ್ನು ಹೊರ ತಂದು ಒಡೆದು ಹಾಕಿ ಬಿಸಾಕಿ ಹೋಗಿದ್ದಾರೆ.
ಜ್ಯೋತಿಗೌಡನಪರ ಗ್ರಾಮದಲ್ಲಿ ನಡೆದಿರುವ ಘಟನೆಗೆ ಆರೋಪಿಗಳ ಪತ್ತೆಗಾಗಿ ಶ್ವಾನದಳವನ್ನು ಕರೆಯಿಸಲಾಗಿದ್ದು, ಶ್ವಾನದಳವು ಬುದ್ಧನ ಗುಡಿಯಿಂದ ನೇರವಾಗಿ ಹಳೇ ಬಡಾವಣೆಯಲ್ಲಿರುವ ಚಾವಡಿ ಬಳಿ ತೆರಳಿ ನಿಂತಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಚಾವಡಿಗೆ ಬೆರಳಚ್ಚು ತಜ್ಞರು ತೆರಳಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ಡಾ.ಬಿ.ಟಿ.ಕವಿತಾ, ಚಾಮರಾಜನಗರ ಪೂರ್ವ ಠಾಣೆಯ ಪೊಲೀಸರು ಜ್ಯೋತಿಗೌಡನಪುರ ಗ್ರಾಮಕ್ಕೆ ಭೇಟಿ ನೀಡಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿರುವ ಪ್ಲೆಕ್ಸ್ ವಿರೂಪಗೊಳಿಸಿರುವುದನ್ನು ಪರಿಶೀಲಿಸಿ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿ, ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದ್ದು, ಘಟನಾ ಸ್ಥಳದಲ್ಲಿ ಬೆರಳಚ್ಚು ಸಿಕ್ಕಿದೆ ಎಂದು ಹೇಳಿ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವುದಾಗಿ ತಿಳಿಸಿದರು.
ವಿರೂಪಗೊಂಡಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಯಿತು. ಜ್ಯೋತಿಗೌಡನಪುರ ಗ್ರಾಮದಲ್ಲಿ ಮುನ್ನೆಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.
ಸಂಸದರ ಭೇಟಿ: ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇರುವ ಪ್ಲೆಕ್ಸ್‌ಗಳಿಗೆ ಹಾಗೂ ಬುದ್ದನ ವಿಗ್ರಹ ಧ್ವಂಸವಾಗಿರುವ ಸ್ಥಳಕ್ಕೆ ಸಂಸದ ಸುನಿಲ್ ಬೋಸ್ ಭೇಟಿ ಪರಿಶೀಲನೆ ನಡೆಸಿದರು.