Chikkamagaluru | ಕಾಡಾನೆ ದಾಳಿಗೆ ಮಹಿಳೆ ಬಲಿ : ಸ್ಥಳೀಯರಿಂದ ಪ್ರತಿಭಟನೆ
ಆ್ಯಂಬುಲೆನ್ಸ್ ತಡೆದ ಪ್ರತಿಭಟನಕಾರರು; ಪೊಲೀಸರಿಂದ ಲಘು ಲಾಠಿ ಚಾರ್ಜ್
ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ರವಿವಾರ ಬೆಳಗ್ಗೆ ಹಾವೇರಿ ಜಿಲ್ಲೆ ಹಾನಗಲ್‍ನ ಕೂಡ್ಲಿಗಿ ನಿವಾಸಿ ಬೋರಮ್ಮ(33) ಎಂಬ ಕೂಲಿ ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಳೆದ ನಾಲ್ಕು ದಿನಗಳ ಅಂತರದಲ್ಲಿ ಇಬ್ಬರನ್ನು ಕಾಡಾನೆ ಬಲಿ ಪಡೆದುಕೊಂಡಿದ್ದು, ಫೆ.17ರಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿರುವಳ್ಳಿ ಗ್ರಾಮದ ಯಲ್ಲಪ್ಪ (45) ಎಂಬ ಕೂಲಿ ಕಾರ್ಮಿಕನನ್ನು ಕಾಡಾನೆ ತುಳಿದು ಕೊಂದು ಹಾಕಿತ್ತು. ರವಿವಾರ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಾಗೇಶ್‍ಗೌಡ ಎಂಬವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬೋರಮ್ಮ ಎಂಬವರನ್ನು ಕಾಡಾನೆ ತುಳಿದು ಸಾಯಿಸಿದೆ.
ಗುಪ್ತವಾಗಿ ಮೃತದೇಹ ಸಾಗಿಸಲು ಮುಂದಾದ ಅಧಿಕಾರಿಗಳನ್ನು ಅಡ್ಡಗಟ್ಟಿದ ಜನರು:
ಇತ್ತೀಚೆಗೆ ಯಲ್ಲಪ್ಪ ಅವರನ್ನು ಕಾಡಾನೆ ಸಾಯಿಸಿದ ಸ್ಥಳದಲ್ಲಿಯೇ ಬೋರಮ್ಮರನ್ನು ತುಳಿದು ಸಾಯಿಸಿದೆ. ಯಾರಿಗೂ ತಿಳಿಯದಂತೆ ಬೋರಮ್ಮ ಅವರ ಮೃತದೇಹವನ್ನು ವಾಹನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾಗಿಸುತ್ತಿದ್ದ ವೇಳೆ ಇದನ್ನು ಅರಿತ ಸ್ಥಳೀಯರು ವಾಹನವನ್ನು ಕಡಬಗೆರೆ ಸಮೀಪ ಅಡ್ಡಗಟ್ಟಿ ಮೃತದೇಹವನ್ನು ವಾಹನದಿಂದ ಇಳಿಸಿದ ಘಟನೆ ನಡೆಯಿತು.
ಸ್ಥಳೀಯರಿಂದ ಆಕ್ರೋಶ :
ಕಾಡಾನೆ ದಾಳಿಯಿಂದ ಮಲೆನಾಡು ಭಾಗದಲ್ಲಿ ಪದೇ ಪದೇ ಸಾವುಗಳು ಸಂಭವಿಸಿದ್ದು, ಇದರಿಂದ ಆಕ್ರೋಶ ಭರಿತರಾದ ಸ್ಥಳೀಯರು ಬೋರಮ್ಮ ಅವರ ಮೃತದೇಹವನ್ನು ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯ ಕಡಬಗೆರೆ ಎಂಬಲ್ಲಿ ಇಟ್ಟು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ, ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಸ್ಥಳೀಯ ಶಾಸಕ ಟಿ.ಡಿ.ರಾಜೇಗೌಡ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಘೆರಾವ್ ಹಾಕಿದರು.
ರಸ್ತೆ ತಡೆ ನಡೆಸಿದ್ದರಿಂದ ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಕಿಲೋ ಮೀಟರ್‍ಗಟ್ಟಲೇ ವಾಹನಗಳ ದಟ್ಟಣೆ ಏರ್ಪಟ್ಟಿತ್ತು. ಸರಕಾರಿ ಮತ್ತು ಖಾಸಗಿ ಬಸ್‍ಗಳು ಸಕಾಲದಲ್ಲಿ ಸಂಚರಿಸಲಾಗದೇ ಪ್ರಯಾಣಿಕರು ಭಾರೀ ಸಮಸ್ಯೆ ಎದುರಿಸಿದರು. ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಅರಣ್ಯ ಸಚಿವರು ಸ್ಥಳಕ್ಕೆ ಬರಬೇಕು, ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಿಸಬೇಕೆಂದು ಪಟ್ಟು ಹಿಡಿದ ಪ್ರತಿಭಟನೆಯನ್ನು ಮುಂದುವರೆಸಿದರು. ಇದರಿಂದ ಕೆಲಹೊತ್ತು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮೃತದೇಹ ಹೊತ್ತ ಆ್ಯಂಬುಲೆನ್ಸ್ ತಡೆದ ಪ್ರತಿಭಟನಕಾರರು; ಪೊಲೀಸರಿಂದ ಲಘು ಲಾಠಿ ಚಾರ್ಜ್, ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ
ಒಂದು ವಾರದ ಅವಧಿಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಕೂಲಿಕಾರ್ಮಿಕರು ಮೃತಪಟ್ಟ ಹಿನ್ನಲೆ ಇಲ್ಲಿನ ಸ್ಥಳೀಯರು ಮೃತದೇಹವಿಟ್ಟು ಬಾರೀ ಪ್ರತಿಭಟನೆ ನಡೆಸಿದರು. ರಸ್ತೆ ತಡೆಯನ್ನು ನಡೆಸಿದರು. ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟುಹಿಡಿದರು. ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ ಸೇರಿದಂತೆ ಅಧಿಕಾರಿಗಳು ಆಗಮಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರಿಸಿದರು.
ನಂತರ ಮೃತದೇಹವನ್ನು ಆ್ಯಂಬುಲೆನ್ಸ್ ವಾಹನದಲ್ಲಿ ಇರಿಸಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯವ ವೇಳೆ ನೆರೆದಿದ್ದ ಪ್ರತಿಭಟನಕಾರರು ಆ್ಯಂಬುಲೆನ್ಸ್ ತಡೆದು ಮೃತದೇಹವನ್ನು ಕೆಳಗಿಳಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ಹಾಗೂ ವಾಗ್ವಾದಗಳು ನಡೆದು ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು.
ಸ್ಥಳದಲ್ಲಿದ್ದ ಪ್ರತಿಭಟನಕಾರರು ಚದುರಿದದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ವೇಳೆ ಆಕ್ರೋಶ ಭರಿತರಾದ ಪ್ರತಿಭಟನಕಾರರು ಪೊಲೀಸ್ ವಾಹನದ ಸುತ್ತಲು ಮುತ್ತಿಗೆ ಹಾಕಿ ವಾಹನ ತೆರಳದಂತೆ ಅಡ್ಡಹಾಕಿದರು.
ಟಯರ್‌ಗೆ ಬೆಂಕಿ ಹಚ್ಚಲು ಯತ್ನ:
ಪ್ರತಿಭಟನೆ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡೆವೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಟೈಯರ್ ಗೆ ಬೆಂಕಿಹಚ್ಚಲು ಯತ್ನಿಸಿದ ಘಟನೆ ನಡೆದಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ವ್ಯಕ್ತಿಯನ್ನು ಬಿಡುಗಡೆಗೊಳಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.