×
Ad

CHIKKAMAGALURU | ಕಾಡಾನೆ ದಾಳಿಗೆ ಮತ್ತೋರ್ವ ಮಹಿಳೆ ಬಲಿ

ಕಳೆದೊಂದು ವಾರದಲ್ಲಿ ನಡೆದ ಎರಡನೇ ಪ್ರಕರಣ

Update: 2026-02-22 11:48 IST

ಚಿಕ್ಕಮಗಳೂರು : ಆನೆ ದಾಳಿಯಿಂದ ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಎನ್.ಆರ್.ಪುರ ತಾಲೂಕಿನ ಹುಣಸೆಹಳ್ಳಿ ಎಂಬಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

ಕೂಡ್ಲಿಗಿ ಮೂಲದ ಕೂಲಿ ಕಾರ್ಮಿಕೆ ಬೋರಮ್ಮ ಮೃತಪಟ್ಟವರು. ಈ ಪರಿಸರದಲ್ಲಿ ಕಳೆದ ನಾಲ್ಕು ದಿನಗಳ ಅಂತರದಲ್ಲಿ ನಡೆದ ಎರಡನೆಯ ಪ್ರಕರಣ ಇದಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಇಂದು ಕೊಪ್ಪ ಅರಣ್ಯ ವಿಭಾಗದ ಹುಣಸೆಹಳ್ಳಿ, ಪುರ ಬಳಿಯ ನಾಗೇಶಗೌಡರ ತೋಟದಲ್ಲಿ ಬೋರಮ್ಮರ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದೆ.

ನಾಲ್ಕು ದಿನಗಳ ಹಿಂದೆ ಇದೆ ತೋಟದಲ್ಲಿ ಕಾಡಾನೆ ದಾಳಿಗೆ ಯಶೋಧ ಎಂಬವರು ಬಲಿಯಾಗಿದ್ದರು. ಈ ಸಂದರ್ಭ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಬಾಳೆಹೊನ್ನೂರು ಆರ್.ಎಫ್.ಓ ಕಚೇರಿ ಎದುರು ನಾಗರಿಕರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಅಧಿಕಾರಿಗಳು/ ಶಾಸಕರು ಆನೆ ಓಡಿಸಲು ಕ್ರಮ ಕೈಗೊಂಡಿದ್ದು, ಕಾಡಾನೆಯನ್ನು ಗಡಿ ದಾಟಿಸಲಾಗಿದೆ ಎಂದು ಹೇಳಿದ್ದರು.

ಅದಲ್ಲದೇ ಕಾಡಾನೆ ಓಡಿಸಲು ಕಾರ್ಯಾಚರಣೆಗೆ ಕರೆತರಲಾಗಿದ್ದ ನಾಲ್ಕು ಆನೆಗಳು ಸ್ಥಳದಲ್ಲೇ ಬೀಡು ಬಿಟ್ಟಿವೆ. ಈ ಮಧ್ಯೆ ಮತ್ತೆ ಆನೆ ದಾಳಿಗೆ ಮಹಿಳೆ ಬಲಿಯಾಗಿರುವುದು ಸ್ಥಳೀಯರನ್ನು ಕೆರಳಿಸಿದೆ.

ರಾ.ಹೆದ್ದಾರಿಯಲ್ಲಿ ಮೃತದೇಹವಿಟ್ಟು ಸ್ಥಳೀಯರ ಪ್ರತಿಭಟನೆ

ಕಾಡಾನೆ ದಾಳಿಗೆ ನಿರಂತರವಾಗಿ ಜೀವ ಬಲಿಯಾಗುತ್ತಿದ್ದರೂ ಇದರ ತಡೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದ ವ್ಯವಸ್ಥೆ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಎನ್.ಆರ್.ಪುರ ತಾಲೂಕಿನ ಕಡಬಗೆರೆಯ ರಾಜ್ಯ ಹೆದ್ದಾರಿಯಲ್ಲಿ ಬೋರಮ್ಮರ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ ಸ್ಥಳಿಯರು ಇಲ್ಲಿ ಒಂದು ವಾರದ ಅಂತರದಲ್ಲಿ ಇಬ್ಬರು ಮಹಿಳೆಯರು ಕಾಡಾನೆ ದಾಳಿಯಿಂದ ಜೀವ ತೆತ್ತಿದ್ದಾರೆ. ಸತ್ತವರಿಗೆ ಪರಿಹಾರ ನೀಡುವುದು ಸಮಸ್ಯೆಗೆ ಪರಿಹಾರವಲ್ಲ. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಶೃಂಗೇರಿ ಶಾಸಕ ರಾಜೇಗೌಡರನ್ನು ಸ್ಥಳಿಯರ ತರಾಟೆಗೈದರು.

ಮಹಿಳೆ ಕೊಂದ ಕಾಡಾನೆ ಸೆರೆ :

ಬಾಳೆಹೊನ್ನೂರ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಮಿಕ ಮಹಿಳೆಯನ್ನು ಕೊಂದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಕುಮ್ಕಿ ಆನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News