ಹಾಸನ, ಕೊಡಗು, ಚಿಕ್ಕಮಗಳೂರು ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ : ಈಶ್ವರ್ ಖಂಡ್ರೆ
ಬಾಳೆಹೊನ್ನೂರು : ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಮಹತ್ವದ್ದಾಗಿದ್ದು, ಅರಣ್ಯ ಇಲಾಖೆ ಯಾವುದೇ ಜನರ ವಿರುದ್ಧವಿಲ್ಲ. ಆದರೆ, ಸುಪ್ರೀಂಕೋರ್ಟ್ ತೀರ್ಪು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ಅರಣ್ಯ ಕಾಯಿದೆ ಕಾನೂನುಗಳ ಪಾಲನೆ ಮಾಡುವ ನಿಟ್ಟಿನಲ್ಲಿ ಕೆಲವು ಅಸಮಾಧಾನಗಳಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಹೇಳಿದ್ದಾರೆ.
ಬಾಳೆಹೊನ್ನೂರಿನ ನಾರಾಯಣಗುರು ಸಮುದಾಯ ಭವನದಲ್ಲಿಂದು ಆಯೋಜಿಸಲಾಗಿದ್ದ ಮಲೆನಾಡು ರೈತರ ಸಮಸ್ಯೆಗಳ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಅರಣ್ಯ ಜಮೀನನ್ನು ಯಾರಿಗೂ ಪರಿಭಾರೆ ಮಾಡಲು ಅವಕಾಶವಿಲ್ಲ. ಆ ರೀತಿ ಅನ್ಯ ಉದ್ದೇಶಕ್ಕೆ ಕಾಡನ್ನು ಬಳಸಲು ನ್ಯಾಯಾಲಯದ ಅನುಮತಿ ಮತ್ತು ಕೇಂದ್ರ ಸರಕಾರದ ಸಮ್ಮತಿ ಅಗತ್ಯ ಎಂದು ಹೇಳಿದರು.
ಸೆಕ್ಷನ್ 4 ಸಮಸ್ಯೆ ಸ್ವಾತಂತ್ರ್ಯಪೂರ್ವದಿಂದಲೂ ಇದೆ. ರಾಜ ಮಹಾರಾಜರ ಕಾಲದಲ್ಲೇ ಅಧಿಸೂಚನೆ ಆದ ಹಲವು ಪ್ರಕರಣ ಸೆಕ್ಷನ್ 17 ಆಗದೆ ಬಾಕಿ ಇದೆ. ಈಗ ಈ ಸಮಸ್ಯೆ ಪರಿಹರಿಸಲು ಸರಕಾರ ಕಾನೂನು ವ್ಯಾಪ್ತಿಯಲ್ಲೇ ಪ್ರಯತ್ನಿಸುತ್ತಿದೆ ಎಂದ ಅವರು, ಅರಣ್ಯ ಭೂಮಿಯನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕಾದರೆ ತೀರುವಳಿ (ಎಫ್.ಸಿ.) ನಿಯಮಗಳ ಪಾಲನೆ ಮಾಡಬೇಕಾಗುತ್ತದೆ ಪರ್ಯಾಯ ಭೂಮಿ ಪಡೆದು, ಅರಣ್ಯ ಬೆಳೆಸಬೇಕಾಗುತ್ತದೆ ಎಂದೂ ತಿಳಿಸಿದರು.
ಇತ್ತೀಚಿಗೆ ಆನೆ ದಾಳಿಯಿಂದ ಎರಡು ಅಮೂಲ್ಯ ಜೀವಹಾನಿ ಆಗಿರುವುದು ಅತ್ಯಂತ ನೋವಿನ ಸಂಗತಿ. ಸರಕಾರ ಆನೆ ಸೆರೆಗೆ ತಕ್ಷಣವೇ ಆದೇಶ ನೀಡಿತ್ತು. ಆನೆ ಸೆರೆ ಕಾರ್ಯಾಚರಣೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಇಲಾಖೆಯ ಶಾರ್ಪ್ ಶೂಟರ್ ಆನೆ ವೆಂಕಟೇಶ್ ಅವರೇ ಮೃತಪಟ್ಟಿದ್ದರು. ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಯೂ ಹುತಾತ್ಮನಾಯಿತು ಎಂದು ಹೇಳಿದರು.
ಮಾನವ ವನ್ಯಜೀವಿ ಸಮಸ್ಯೆ ಇಂದು ನಿನ್ನೆಯದಲ್ಲ. ರಾಜ ಮಹಾರಾಜರು ವನ್ಯಜೀವಿ ಉಪಟಳ ಹೆಚ್ಚಾದಾಗ ಬೇಟೆಗೆ ಹೋಗುತ್ತಿದ್ದರು. ಕಳ್ಳಬೇಟೆಯೂ ನಡೆಯುತ್ತಿತ್ತು. ಪ್ರಕೃತಿ ಪರಿಸರದ ಸಮತೋಲನ ಕಾಪಾಡಲು ವನ್ಯಜೀವಿಗಳ ಮಹತ್ವ ಮನಗಂಡು ದಿವಂಗತ ಪ್ರಧಾನಿ ಇಂದಿರಾಗಾಂಧೀ ಅವರು 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ತಂದ ಬಳಿಕ ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 6395 ಆನೆಗಳೊಂದಿಗೆ ರಾಜ್ಯ ಗಜಪಡೆಯಲ್ಲಿ ನಂ.1 ಆಗಿದೆ. ಹುಲಿ ಸಂಖ್ಯೆಯಲ್ಲಿ ನಂ.2 ಸ್ಥಾನದಲ್ಲಿದೆ. ಆನೆ, ಹುಲಿಗಳ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಕ್ಷೀಣಿಸುತ್ತಿರುವ ಅರಣ್ಯದಿಂದಾಗಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ ಎಂದರು.
ಆನೆಗಳೂ ಕೂಡ ನಮ್ಮಂತೆಯೇ ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡಿವೆ. ತೋಟಗಳಿಗೆ ಬಂದು ತಿನ್ನಲು ಆರಂಭಿಸಿವೆ. ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಆನೆಗಳು, ಕಾಡೆಮ್ಮೆ, ಕಾಡುಕೋಣ ನಾಡಿಗೆ ಬಾರದಂತೆ ತಡೆಯಲು ಅಗತ್ಯಕ್ಕೆ ಅನುಗುಣವಾಗಿ ರೈಲ್ವೆ ಬ್ಯಾರಿಕೇಡ್ ಮಂಜೂರು ಮಾಡಲಾಗಿದೆ. ಈಗ ಪ್ರಕ್ರಿಯೆ ಪ್ರಾರಂಭವಾಗಿದ್ದು, 140 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ. 12 ಕೋಟಿ ರೂ. ವೆಚ್ಚದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ 7 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಹಾಕಲು ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗುತ್ತದೆ. ಎಂದರು.
ಕೊಪ್ಪದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ಹಾನಿ ಮತ್ತು ಜೀವ ಆನೆ ಆಗುತ್ತಿದ್ದು, ಕೊಪ್ಪದಲ್ಲಿ ಪ್ರತ್ಯೇಕ ಆನೆ ಕಾರ್ಯಪಡೆ ಸ್ಥಾಪನೆಗೆ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ವನ್ಯಜೀವಿ ಸಂಚಾರ ಹೆಚ್ಚಾಗಿರುವ ಕಡೆ ಥರ್ಮಲ್ ಡ್ರೋನ್ ಕ್ಯಾಮರಾ ನೆರವಿನಿಂದ ಅವುಗಳ ಚಲನ ವಲನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ರೇಡಿಯೋ ಕಾಲರ್ ಗಳನ್ನು ಹಿಂಡು ಆನೆಗೆ ಅಳವಡಿಸಿ, ಜನವಸತಿ ಪ್ರದೇಶಕ್ಕೆ ಬಂದರೆ ತತ್ ಕ್ಷಣವೇ ಮಾಹಿತಿ ನೀಡುವ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಮಧ್ಯಪ್ರದೇಶದಲ್ಲಿ ಕಾಡೆಮ್ಮೆ, ಕಾಡುಕೋಣದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು, ಅದರ ಅಧ್ಯಯನಕ್ಕೆ ತಂಡ ಕಳಿಸಲಾಗುತ್ತಿದೆ ಎಂದು ತಿಳಿಸಿದರು.